Sunday, July 12, 2020

ವೀರ ಸಾವರ್ಕರ್ ಒಡನಾಡಿಯಾಗಿದ್ದ ಕನ್ನಡದ ಕುಲಪುರೋಹಿತರ ಬಗ್ಗೆ ಇಂದಿನ ಕನ್ನಡ ಹೋರಾಟಗಾರರಿಗೆಷ್ಟು ಗೊತ್ತು??


ಕನ್ನಡಕ್ಕೊಬ್ಬರು ಕುಲಪುರೋಹಿತರಿದ್ದರು.  ಕರ್ನಾಟಕದ ಏಕೀಕರಣಕ್ಕಾಗಿ ಅವರು ರಕ್ತ ಬಸಿದಿದ್ದರು.  ಅವರನ್ನು ಇಂದಿನ ಎಷ್ಟು ಕನ್ನಡ ಹೋರಾಟಗಾರರು ನೆನಪಿಟ್ಟುಕೊಂಡಿದ್ದಾರೆ.
"ಕನ್ನಡ ತಾಯಿಗೆ ಈಗ ಬಂದೊದಗಿದ ವಿಷಮ ಸ್ಥಿತಿಯನ್ನು ಕಂಡು ಯಾವಾತನ ಹೃದಯದ ತಲ್ಲಣಿಸುವುದಿಲ್ಲವೋ ಅದು ಹೃದಯವಲ್ಲ ಕಲ್ಲಿನ ಬಂಡೆ ; ದೇಹವಲ್ಲ, ಮೋಟು ಮರ " ಎಂಬ ಅವರ ಮಾತುಗಳು  ಮತ್ತೆ ಕಟ್ಟಬೇಕಿದ್ದ ಕನ್ನಡದ ಸಮಗ್ರ ಚಿಂತನೆಗೆ ಒಂದು ಅಡಿಗಲ್ಲಿನಂತಿತ್ತು.  ಆಲೂರು ವೆಂಕಟರಾಯರು ಹುಟ್ಟಿದ ದಿನವಿಂದು.  ಅವರ ಜನ್ಮದಿನ ಕನ್ನಡಿಗರಿಗೆ ಪ್ರೇರಣೆ ನೀಡುವ ಸಂಭ್ರಮದ ದಿನವಾಗಬೇಕಿತ್ತು.  ಕನ್ನಡ ಹೋರಾಟಗಾರರಿಗೆ ಆರಾಧ್ಯ ದೈವವಾಗಬೇಕಿದ್ದ ಆಲೂರರ ಬಗ್ಗೆ ತಿಳಿದುಕೊಳ್ಳಲು ರಾಜಕೀಯ ಪ್ರೇರಿತ ಕನ್ನಡಪರ ಸಂಘಟನೆಗಳಿಗೆ ಅದೇನೋ ವೈರಾಗ್ಯ. ಆಲೂರರು ಕೇವಲ ಕನ್ನಡ ಹೋರಾಟಗಾರರಾಗಿರಲಿಲ್ಲ ಅವರೊಬ್ಬ ಪತ್ರಕರ್ತರಾಗಿದ್ದರು,  ಸ್ವತಃ ಸಾಹಿತಿಯಾಗಿದ್ದರು,  ಉದ್ಯಮಿಯಾಗಿದ್ದರು, ಅಧ್ಯಾತ್ಮ ಜೀವಿಯಾಗಿದ್ದರು, ರಾಷ್ಟೀಯವಾದಿಯಾಗಿದ್ದರು. ಆಲೂರರು
1903ರಲ್ಲಿ ಬಿ.ಎ ಪದವಿ ಪಡೆದು 1905ರಲ್ಲಿ ಮುಂಬೈ ನಲ್ಲಿ ಎಲ್ ಎಲ್ ಬಿ ಪದವಿ ಪಡೆದು ಧಾರವಾಡಕ್ಕೆ ವಾಪಸ್ಸಾಗುವಾಗ ಸೇನಾಪತಿ ಬಾಪಟ್ ಹಾಗೂ ವೀರ ಸಾವರ್ಕರ್ ಅವರ ಒಡನಾಟದಿಂದ ಬಹಳಷ್ಟು ಪ್ರಭಾವಿತರಾಗಿದ್ದರು.  ಹೌದು ಯಾವ ಆಲೂರು ವೆಂಕಟರಾಯರು ಕರ್ನಾಟಕದ ಏಕೀಕರಣಕ್ಕಾಗಿ ಹಗಲಿರುಳು ದುಡಿದರೋ, ಯಾವ ಆಲೂರರು ಕರ್ನಾಟಕ ಇತಿಹಾಸ ಮಂಡಲದ ಸ್ಥಾಪನೆ ಮಾಡಿದರೋ, ಯಾವ ಆಲೂರರು ಕರ್ನಾಟಕ ಸಾಹಿತ್ಯ ಪರಿಷತ್ತನ್ನು ಸ್ಥಾಪಿಸಿದರೋ, ಕರ್ನಾಟಕ ವಿಶ್ವ ವಿದ್ಯಾಲಯದ ಕಲ್ಪನೆಯನ್ನು ಹುಟ್ಟುಹಾಕಿದರೋ, ಯಾವ ಆಲೂರರು ವಿಜಯ ನಗರ  ಮಹೋತ್ಸವ,  ನಾಡಹಬ್ಬದ ಯೋಜನೆಗಳಿಗೆ ಅಡಿಗಲ್ಲು ಹಾಕಿದರೋ, ಕರ್ನಾಟಕ ವಿದ್ಯಾವರ್ಧಕ ಸಂಘದ ರೂವಾರಿಗಳಾಗಿದ್ದರೋ ಅದೇ ಕನ್ನಡದ ಕುಲಪುರೋಹಿತ ಅಪ್ರತಿಮ ದೇಶಪ್ರೇಮಿ ವಿನಾಯಕ ದಾಮೋದರ ಸಾವರ್ಕರ್ ಅಂದ್ರೆ ವೀರ ಸಾವರ್ಕರ್ ಅವರ ಒಡನಾಡಿಯಾಗಿದ್ದು ಅವರಿಂದ ಪ್ರೇರಣೆ ಪಡೆದಿದ್ದರು ಎನ್ನುವುದು ಇಂದಿನ ಕನ್ನಡ ಹೋರಾಟಗಾರರು ಅಂತ ಕರೆಸಿಕೊಳ್ಳುವವರಿಗೆ ತಿಳಿದಿದೆಯಾ?  ತಿಳಿದಿದ್ದರೆ ಖಂಡಿತ ಒಂದು ಮೇಲ್ಸೇತುವೆಗೆ ಸಾವರ್ಕರ್ ಹೆಸರಿಡುವುದಕ್ಕೆ ವಿರೋಧಿಸುತ್ತಿರಲಿಲ್ಲ.
ಮರಾಠಿಯದ್ದೇ ಪ್ರಾಬಲ್ಯ ಹೊಂದಿದ್ದ ಮುಂಬೈ ಪ್ರಾಂತ್ಯದಲ್ಲಿ  ವಾಗ್ಭುಷಣ ಎನ್ನುವ ಪತ್ರಿಕೆ ಪ್ರಾರಂಭಿಸಿ ನೂರಾರು ಬರಹಗಾರರಿಗೆ ವೇದಿಕೆ ಕಲ್ಪಿಸುತ್ತಾರೆ.
ಬಾಲಗಂಗಾಧರ ತಿಲಕರ ಅತ್ಯಂತ ಆಪ್ತರಾಗಿದ್ದ ಆಲೂರರು  ಕನ್ನಡಕ್ಕಾಗಿ ಎಷ್ಟು ದುಡಿದರೋ ಅಷ್ಟೇ ಶ್ರಮವಹಿಸಿ ರಾಷ್ಟೀಯ ಚಿಂತನೆಗಾಗಿ ಹೋರಾಡಿದರು. ತಿಲಕರ ಗೀತಾ ರಹಸ್ಯವನ್ನು ಅವರ ಒತ್ತಾಯದ ಮೇರೆಗೆ ಕನ್ನಡಕ್ಕೆ ಅನುವಾದಿಸುತ್ತಾರೆ.  ಇದು ಆಲೂರರ ಧಾರ್ಮಿಕ ಹಾಗೂ ರಾಜಕೀಯ ದೃಷ್ಟಿ ಕೋನಕ್ಕೆ ಕನ್ನಡಿ ಹಿಡಿದಂತಿದೆ. ಅವರೊಬ್ಬ ಅದ್ಭುತ ಧಾರ್ಮಿಕ ಚಿಂತಕರಾಗಿದ್ದರು.  ಸದಾ ಧಾರ್ಮಿಕ ಚಿಂತನೆಯಲ್ಲಿ ತೊಡಗಿದ್ದರೂ ಕೂಡ ರಾಷ್ಟ್ರ ಚಿಂತನೆಯ ಸಂದರ್ಭ ಬಂದಾಗ ಅಪ್ಪಟ ರಾಷ್ಟೀಯವಾದಿಯಾಗಿ ಹೋರಾಟಕ್ಕಿಳಿಯುತ್ತಿದ್ದರು.  ಸ್ವತಃ ಒಬ್ಬ ವಕೀಲರಾಗಿದ್ದರೂ ಕೂಡ ಸ್ವದೇಶಿ ಚಳುವಳಿ ಬಂದಾಗ ತಮ್ಮ ವೃತ್ತಿ ತ್ಯಜಿಸಿ ಹೋರಾಟಕ್ಕೆ ಧುಮುಕಿದ ಅವರ ಬದ್ಧತೆಯೇ ಅದಕ್ಕೆ ಸಾಕ್ಷಿ.
ಕರ್ನಾಟಕದ ಮೂಲೆ ಮೂಲೆಗಳಲ್ಲೂ ಕನ್ನಡ ಸಾಹಿತಿಗಳನ್ನು ಬೆಳೆಸಬೇಕೆಂಬ ಹಂಬಲ ಹೊಂದಿದ್ದ ಆಲೂರರು ಅವರಿಗೆಲ್ಲ ವೇದಿಕೆ ಕಲ್ಪಿಸುವ ಉದ್ದೇಶದಿಂದಲೇ 'ಜಯಕರ್ನಾಟಕ ' ಎಂಬ ಪತ್ರಿಕೆ ಪ್ರಾರಂಭಿಸುತ್ತಾರೆ. ದ.ರಾ. ಬೇಂದ್ರೆ,  ಬೆಟಗೇರಿ ಕೃಷ್ಣ ಶರ್ಮಾ, ಶ್ರೀ ರಂಗ, ಶಂ ಭಾ. ಜೋಶಿಯವರಂತಹ ಹಲವರು ಸಾಹಿತ್ಯ ರತ್ನಗಳು ಹುಟ್ಟಿ ಬಂದದ್ದು ಇಲ್ಲಿಂದಲೇ.  ನೂರಾರು ಶ್ರೇಷ್ಠ ಸಾಹಿತಿಗಳನ್ನು ಸಲಹಿ ಪೋಷಿಸಿದ ಸ್ವತಃ 25ಕ್ಕೂ ಹೆಚ್ಚು ಕೃತಿಗಳನ್ನು ಬರೆದ್ದರೂ ಎಂದಿಗೂ ತಾನೊಬ್ಬ ಸಾಹಿತಿ ಎಂದು ಗುರುತಿಸಿಕೊಳ್ಳಲು ಬಯಸಿರಲಿಲ್ಲ.
ಆಲೂರರು ಅದೆಂತಹ ಅಧ್ಯಾತ್ಮ ಜೀವಿಯಾಗಿದ್ದರೆಂದರೆ 1931 ರಲ್ಲಿ ಬ್ರಿಟಿಷ್ ಸರ್ಕಾರ ಅವರನ್ನು ಬಂಧಿಸಲು ಸರ್ಚ್ ವಾರೆಂಟ್ ಜಾರಿಗೊಳಿಸುತ್ತದಂತೆ. ಆಮೇಲೆ ಅವರನ್ನು ಕಲಘಟಗಿ ಎನ್ನುವ ಪ್ರದೇಶದಲ್ಲಿ ಬಂಧಿಸಿಡಲಾಗುತ್ತದಂತೆ.  ಒಬ್ಬ ಅಪ್ರತಿಮ ಹೋರಾಟಗಾರರಾಗಿದ್ದ ಆಲೂರರು"ಈ  ಬಂಧನದಿಂದ  ನನಗೇನೂ ನಷ್ಟವಿಲ್ಲ ಆಧ್ಯಾತ್ಮ ಚಿಂತನೆಗೆ, ಅಧ್ಯಯನಕ್ಕೆ ನನಗೊಂದಿಷ್ಟು ಬಿಡುವು ಸಿಕ್ಕಂತಾಗಿದೆ " ಎಂದಿದ್ದರಂತೆ. ಅದರಂತೆಯೇ ಬಿಡುಗಡೆಯ ಬಳಿಕ ಭಗವದ್ಗೀತೆಯ ಕುರಿತು ನಾಲ್ಕು ವಿದ್ವತ್ ಪೂರ್ಣ ಗ್ರಂಥಗಳನ್ನೂ ರಚಿಸಿದರು.
ಆಲೂರರು ಒಬ್ಬ ವಿಭಿನ್ನ ಚಿಂತನೆಯ ಉದ್ಯಮಿ ಕೂಡ ಆಗಿದ್ದರು.  ಸ್ವದೇಶಿ ಚಳುವಳಿಯಿಂದ ಬಹಳಷ್ಟು ಪ್ರಭಾವಿತರಾಗಿದ್ದ ಆಲೂರರು ಈ ನೆಲದ ಮಕ್ಕಳ ಕೈಗೆ ದುಡಿಮೆ ನೀಡಬೇಕೆಂಬ ಕಾರಣಕ್ಕೆ ಹೆಂಚಿನ ಕಾರ್ಖಾನೆ, ಹತ್ತಿಯ ಮಿಲ್ಲು, ಸಕ್ಕರೆ ಕಾರ್ಖಾನೆ,  ಬೆಂಕಿ ಪಟ್ಟಣದ ಕಾರ್ಖಾನೆ,  ಪೆನ್ಸಿಲ್ ತಯಾರಿಸುವ ಕಾರ್ಖಾನೆ,  ಬಟ್ಟೆಯ ಫ್ಯಾಕ್ಟರಿಗಳನ್ನು ಪ್ರಾರಂಭಿಸಿದ್ದರಂತೆ.  ಬಹುತೇಕ ಕಾರ್ಖಾನೆಗಳು ಬ್ರಿಟಿಷರ ದಬ್ಬಾಳಿಕೆಯಿಂದ ಮುಚ್ಚಲ್ಪಟ್ಟಿತ್ತು. ಕೇವಲ ತಯಾರಿಕಾ ಕಾರ್ಖಾನೆಗಳಷ್ಟೇ ಅಲ್ಲದೆ ಸೇವಾ ವಲಯದ ಉದ್ಯಮಗಳಾದ ವೃತ್ತಿಪರ ತರಬೇತಿ,  ಚಿತ್ರಕಲಾ ತರಬೇತಿ ಪೇಯಿಂಟಿಂಗ್ ತರಬೇತಿ ಹೀಗೆ ಹತ್ತು ಹಲವು ತರಬೇತಿ ಶಿಕ್ಷಣವನ್ನೂ ಕನ್ನಡಿಗರಿಗಾಗಿ ಪ್ರಾರಂಭಿಸಿದ್ದರು.  ಇವೆಲ್ಲ ದುಡಿಯುವ ಕೈಗಳಿಗೆ ದುಡಿಮೆ ನೀಡುವ ಉದ್ದೇಶದಿಂದ ಪ್ರಾರಂಭಿಸಿದ ಉದ್ಯಮಗಳೇ ಹೊರತು ಲಾಭದಾಯಕ ದೃಷ್ಟಿಕೋನ ಹೊಂದಿರಲಿಲ್ಲ.
ಕನ್ನಡದ ಸಂಸ್ಕೃತಿ,  ಶ್ರೀಮಂತ ಪರಂಪರೆ,  ಸಾಹಿತ್ಯ ವೈಭವಗಳನ್ನು ಮತ್ತೆ ಕಟ್ಟುವುದಕ್ಕಾಗಿ ತಮ್ಮ ಇಡೀ ಜೀವನವನ್ನೇ ಸವೆಸಿದ ಶ್ರೇಷ್ಠ ವ್ಯಕ್ತಿತ್ವ ಆಲೂರು ವೆಂಟಕರಾಯರದ್ದು. ಅದಕ್ಕಾಗಿಯೇ ವರಕವಿ ದ. ರಾ. ಬೇಂದ್ರೆಯವರು ವೆಂಕಟರಾಯರನ್ನು "ಕರ್ನಾಟಕದ ಪ್ರಾಣೋಪಾಸಕರು " ಅಂತಲೇ ಕರೆದದ್ದು.  ಕನ್ನಡಕ್ಕಾಗಿ ದುಡಿದವರಲ್ಲಿ ಆಲೂರು ವೆಂಕಟರಾಯರು ನಿತ್ಯ ಸ್ಮರಣೀಯರು. ಕನ್ನಡಕ್ಕಾಗಿ ಹೋರಾಡುವುದೆಂದರೆ ತಮ್ಮ ಮಕ್ಕಳನ್ನು ಇಂಗ್ಲೀಷ್ ಮೀಡಿಯಂ ಶಾಲೆಗೆ ಹಾಕಿ ಕನ್ನಡ ಮಾಧ್ಯಮ ಶಾಲೆ ಉಳಿಸುವ ಹೋರಾಟ ಮಾಡುವುದಲ್ಲ,  ಬದಲಿಗೆ ಆಲೂರು ವೆಂಕಟರಾಯರು ಹಾಕಿ ಕೊಟ್ಟ ಹಾದಿಯಲ್ಲಿ ನಡೆಯುವ ಪ್ರಯತ್ನ ಮಾಡುವುದು. ಅದು ರಾಷ್ಟೀಯತೆಯ ಹಾದಿಯಾಗಿರುವ ಕಾರಣಕ್ಕೆ ಬಹಳ ಮಂದಿಗೆ ಅಪಥ್ಯವಾಗಿದೆ ಅಷ್ಟೇ.
✍️ಚೈತ್ರಾ ಕುಂದಾಪುರ 

Saturday, May 9, 2020

ಮಾವು, ಹಲಸು ಅಂದರೆ ಕರಾವಳಿ, ಮಲೆನಾಡಿಗರಿಗೆ ಕೇವಲ ಹಣ್ಣಲ್ಲ.. ಭಾವನೆಗಳ ಹೂರಣ

ಅಂಗಳದಲ್ಲಿ ಕುಕ್ಕುರುಗಾಲಲ್ಲಿ ಕೂತುಕೊಂಡು ಒಂದು ಡಜನ್ ಕೆಂಪು ಹಸಿರು ಗಚ್ಚಿನ ಬಳೆ ಹಾಕಿದ ನೆರಿಗೆ ಕಟ್ಟಿದ ಕೈಗಳಿಂದ ಕಾಟು ಮಾವಿನ ಸಿಪ್ಪೆ ತೆಗೆದು ಗೆರಸಿ ಮೇಲೆ ಪ್ಲಾಸ್ಟಿಕ್ ಇಟ್ಟು ಅದಕ್ಕೆ ರಸವನ್ನೆಲ್ಲ ಹಿಂಡಿ ಬಸಳೆ ಚಪ್ಪರದ ಮೇಲೆ ಬಿಸಿಲಿಗೆ ಇಟ್ಟು ಮಳೆಗಾಲಕ್ಕೆ ಚಟ್ನಿ ಅರೆಯುವುದಕ್ಕಂತಲೇ "ಹಣ್ಣು ಚೊಟ್ಟು " ಮಾಡಿಡುತ್ತಿದ್ದ ಅಜ್ಜಿ ಇವತ್ತು ತುಂಬಾ ನೆನಪಾಗಿ ಬಿಟ್ಟರು.   ಮಾವು ಅಂದರೆ ಹಾಗೆ  ಅದು ಬರಿ ಹಣ್ಣಲ್ಲ ನೆನಪುಗಳ ಗುಚ್ಛ..  ಮಾರ್ಚ್ ಪರೀಕ್ಷೆ ಮುಗಿಯುವುದರೊಳಗೆ ಮಿಡಿಗಳೆಲ್ಲಾ ದೋರೆಯಾಗುತ್ತಿದ್ದಂತೆ ಚೀಲಕ್ಕೆ ಹಾಕಿಕೊಂಡು ಕುಂದಾಪುರಕ್ಕೆ ಹೊರಟು ಬರುತ್ತಿದ್ದ ಅಜ್ಜ ಬದುಕಿರುವ ತನಕವೂ ಯಾವತ್ತೂ ನಮ್ಮನ್ನು ಮಾವಿಗಾಗಿ ಕಾಯಲು ಬಿಟ್ಟಿಲ್ಲ.  ಹಣ್ಣಿನ ಮರಗಳ ಮೇಲೆ ಅಜ್ಜನಿಗಿದ್ದ ಸೆಳೆತವೇ ಅಂತದ್ದು.  ಗಿಡ ನೆಡಲೆಂದೇ ಬಾರ್ಕೂರಿನಿಂದ  ನೆಕ್ಕರೆ,  ಕುಂಜಾಲಿನಿಂದ ಮಲಗೋವಾ ತಳಿಗಳ ಹಣ್ಣು ತರುತ್ತಿದ್ದರು. ಹೋರಿಗಳಿಗೆ ಅಕ್ಕಚ್ಚು ಕೊಟ್ಟು ಬಂದು  ರೇಡಿಯೋ ಚಾಲು ಮಾಡಿ ಪತ್ತಾಸಿನ ಮೇಲೆ ಕಚ್ಚೆ ಹಾಕಿ ಕೂತು ಕತ್ತಿಯಿಂದ ಹಣ್ಣನ್ನೆಲ್ಲ ಕಟ್ ಮಾಡಿ ಇಡುತ್ತಿದ್ದರೆ ನಮಗೆಲ್ಲ ಗೊರಟಿನ ಭಾಗ ಯಾರಿಗೆ ಕೊಡ್ತಾರೆ ಅನ್ನೋದೇ ಕುತೂಹಲ..  ಅಜ್ಜನಿಗೂ ಗೊತ್ತಿರುತ್ತಿತ್ತು ನಾವು ಗೊರಟಿಗೆ ಕಾಯ್ತೆವೇ ಅಂತ.  ಎಲ್ಲರಿಗಿಂತ ಮೊದಲು ನನ್ನ ಕರೆದು ಗೊರಟಿನ ಭಾಗ ಕೊಡ್ತಿದ್ದರು.  ಅಲ್ಲಿಂದಾಚೆಗೆ ಕನಿಷ್ಠ 2 ಗಂಟೆಯ ತನಕವಾದರೂ ಅದನ್ನ ನೆಕ್ಕಿ ನೆಕ್ಕಿ ಎರಡು ಸಲ ಪೂರ್ತಿ ಗೊರಟನ್ನ ಬಾಯಿಯೊಳಗೆ ತುಂಬಿಸಿ ಕೊಂಡು ಮತ್ತೆ ಹೊರಗೆ ತೆಗೆದು ಇನ್ನೇನು ಅದರಲ್ಲಿ ರಸ ಉಳಿದಿಲ್ಲ ಅಂತ ಖಾತ್ರಿಯಾದ ಮೇಲೆ ಚಿಕ್ಕಿಗೆ ಕೊಡುತ್ತಿದ್ದೆ.  ಚಿಕ್ಕಿಯೋ ನನ್ನನ್ನು  ಬೆನ್ನ ಮೇಲೆ ಹೊತ್ತುಕೊಂಡು ಉಪ್ಪು ಮೂಟೆ ಮಾಡುತ್ತಾ ಗೆದ್ದೆಗೆ ಕರೆದುಕೊಂಡು ಹೋಗಿ ಅಲ್ಲಿ ಎಷ್ಟು ದೂರ ಸಾಧ್ಯವೋ ಅಷ್ಟು ದೂರ ಎಸೆದು 'ಕೂ' ಹೊಡೆದು ಬರುತ್ತಿದ್ದೆವು.  ಆಮೇಲೆ ನಾವು ಗೊರಟು ಎಸೆದಲ್ಲಿ ಗಿಡ ಬೆಳೆದಿದೆಯಾ ಅಂತ ನಿತ್ಯವೂ ನೋಡುವ ಕಾಯಕ ನಮಗೆ.
ಮನೆಯ ಹಿಂದಿನ ಕಾಟು ಮರದ ಹಣ್ಣನ್ನೆಲ್ಲಾ ಹೆಕ್ಕಿ ತಂದು ಕುಕ್ಕೆಯಲ್ಲಿ ಹಾಕಿಡುತ್ತಿದ್ದ ಅಜ್ಜಿ,  ವರ್ಷವೂ ಮೊದಲ ಹಣ್ಣನ್ನು ದೋರೆ ಇರುವಾಗಲೇ ಅಕ್ಕಿ ಡಬ್ಬಿಯೊಳಗೆ ಹುಗಿದಿಟ್ಟು ಹಣ್ಣಾದ ಕೂಡಲೇ ನಮಗೆ ತಂದು ಕೊಡುತ್ತಿದ್ದ ಅಜ್ಜ ಇವತ್ತು ತುಂಬಾ ನೆನಪಾಗಿ ಬಿಟ್ಟರು.  ಇವತ್ತು ಅಮ್ಮ ಚೀಲದಲ್ಲಿ ಹಣ್ಣು ತಂದಾಗ ಚಂಗನೆ ಹಾರಿ ಹೋಗಿ ಹಣ್ಣನ್ನೆಲ್ಲಾ  ತೆಗೆದಿಟ್ಟೆ.  ತಕ್ಷಣವೇ ಯಾವತ್ತೂ ಮಾವು,  ಹಲಸು ಕಡಿಮೆಯಾಗದಂತೆ ನೋಡಿಕೊಂಡಿದ್ದ ಅಜ್ಜ ಅಜ್ಜಿಯ ನೆನಪು ಕಣ್ಣು ತುಂಬಿ ಬರುವಂತೆ ಮಾಡಿದವು.  ಮಾವು,  ಹಲಸು ಅಂದರೆ ಕರಾವಳಿ,  ಮಲೆನಾಡಿನವರಿಗೆ ಕೇವಲ ಹಣ್ಣುಗಳಲ್ಲ, ಭಾವನೆಗಳ ಹೂರಣ..  ಹೇಳಿಕೊಳ್ಳಲಾಗದ ಆತ್ಮೀಯತೆಯ ಸೆಳೆತ.  ಇದೆಲ್ಲಾ ಮಾರ್ಕೆಟ್ ನಲ್ಲಿ ಕೆ.ಜಿ ಲೆಕ್ಕದಲ್ಲಿ ದುಡ್ಡು ಕೊಟ್ಟು ತಿನ್ನುವ ಇವತ್ತಿನವರಿಗೆ ಅರ್ಥವಾಗಲಿಕ್ಕಿಲ್ಲ.
✍️ಕಾಳಿಕಾ ಛಾಯೆ

Friday, April 24, 2020

ಜಗತ್ತಿನ ಅತಿ ದೊಡ್ಡ ವಿದ್ಯಾರ್ಥಿ ಸಂಘಟನೆಯ ಶಿಲ್ಪಿಯ ಜನ್ಮದಿನವಿಂದು...

✍🏻 ಚೈತ್ರ ಕುಂದಾಪುರ
 ನನಗೆ ಈಗಲೂ ನೆನಪಿದೆ..  ಎಬಿವಿಪಿಯ ರಾಷ್ಟೀಯ ಅಧಿವೇಶನದಲ್ಲಿ ವಿಶೇಷ ಅಂತ ಕರೆಸಿಕೊಳ್ಳುವ ಕಾರ್ಯಕ್ರಮ ಅಂತ ಒಂದು ಇದ್ರೆ ಅದು "ಪ್ರೊ. ಯಶವಂತ ರಾವ್ ಕೇಳ್ಕರ್ ಯುವ ಪುರಸ್ಕಾರ " ಪ್ರಶಸ್ತಿ ಪ್ರಧಾನ ಸಮಾರಂಭ.
ಪ್ರತಿ ಬಾರಿ ಸಾಮಾಜಿಕ ಕೆಲಸದಲ್ಲಿ ತೊಡಗಿಸಿಕೊಂಡ ಯುವ ಸಾಧಕರನ್ನು ಗುರುತಿಸಿ  50 ಸಾವಿರ ನಗದು ಹಾಗೂ ಪ್ರಶಸ್ತಿ ಫಲಕವನ್ನು ಹೊಂದಿದ ಪುರಸ್ಕಾರವದು..  ಸಾಮಾನ್ಯವಾಗಿ ವ್ಯಕ್ತಿ ಪೂಜೆ ಸಲ್ಲದ,  ಭಗವಾ ಧ್ವಜವೇ ಗುರುವೆಂದು ಸ್ವೀಕರಿಸಿದ ಸಂಘ ಮತ್ತು ಎಬಿವಿಪಿಯಲ್ಲಿ ಒಬ್ಬ ವ್ಯಕ್ತಿಯ ಹೆಸರಿನಲ್ಲಿ ಪ್ರಶಸ್ತಿ ಕೊಡುವುದು ಕಂಡಾಗೆಲ್ಲ ನನಗೆ ಆಶ್ಚರ್ಯ ಮತ್ತು ಗೊಂದಲವಾಗುತ್ತಿತ್ತು.   ಆದರೆ  ಅದಕ್ಕೆಲ್ಲ ಉತ್ತರವೆಂಬಂತೆ ಕಂಡದ್ದು ಯಶವಂತ ರಾವ್ ಕೇಳ್ಕರ್ ಎನ್ನುವ ಮೇಧಾವಿ ಕೆಲವೇ ಕೆಲವು  ವಿದ್ಯಾರ್ಥಿಗಳಿಂದ ಪ್ರಾರಂಭವಾದ ಸಂಘಟನೆಯನ್ನು ಜಗತ್ತಿನ ಅತಿ ದೊಡ್ಡ ವಿದ್ಯಾರ್ಥಿ ಸಂಘಟನೆಯಾಗಿ ಬೆಳೆಸಿದ ಪರಿ.   ಎಬಿವಿಪಿಯಲ್ಲಿ ಸಾಮಾನ್ಯವಾಗಿ ಅತ್ಯಂತ ಚುರುಕಾಗಿ ಕೆಲಸ ಮಾಡುವ ಕಾರ್ಯಕರ್ತನಿದ್ದರೆ  ಆತನನ್ನು ನೋಡಿ ಹಿರಿಯರು  "ಯಶವಂತ ರಾವ್ ತರ ಇವನ ಹೆಸರಲ್ಲೂ ಒಂದು ಪ್ರಶಸ್ತಿ ಶುರು ಮಾಡಬೇಕಾಗುತ್ತೆ ನೋಡ್ತಿರಿ ' ಅಂತ ತಮಾಷೆ ಮಾಡಿ ಹುರಿದುಂಬಿಸುವುದಿದೆ.  ಇದಕ್ಕೆ ಕಾರಣ ಯಶವಂತ ರಾವ್ ಕೇಳ್ಕರ್ ಎನ್ನುವ ಧೀಮಂತ ವ್ಯಕ್ತಿತ್ವ ಸಂಘಟನೆಯ ರೂಪದಲ್ಲಿ ಜೀವಂತ ಸಿದ್ಧಾಂತವಾಗಿ ಉಳಿದಿರುವುದು.
"ನಾನಳಿವೆ ನೀನಳಿವೆ ನಮ್ಮೆಲುಬುಗಳ ಮೇಲೆ ಮೂಡುತಿರಲಿ ಹೊಸ ಭಾರತದ ಲೀಲೆ" ಎಂಬಂತೆ ಬದುಕಿದವರು ಕೇಳ್ಕರ್..
ಎಡಪಂಥೀಯ ನಕ್ಸಲ್ ವಾದಗಳೇ ಕ್ಯಾಂಪಸ್ ನಲ್ಲಿ ತುಂಬಿ ತುಳುಕುತ್ತಿದ್ದ ಕಾಲಘಟ್ಟದಲ್ಲಿ ಇದಕ್ಕೆಲ್ಲ ಎದುರಾಗಿ ಈ ನೆಲದ ಸಂಸ್ಕೃತಿಗೆ ತಕ್ಕಂತೆ ಬದುಕುವಂತೆ ವಿದ್ಯಾರ್ಥಿಗಳನ್ನು ರೂಪಿಸುವುದಕ್ಕಾಗಿ
1949 ರಲ್ಲಿ ಬಾಲರಾಜ್ ಮೋಧಕ್ ಎನ್ನುವ ಆರ್ ಎಸ್ ಎಸ್ ಪ್ರಚಾರಕರೊಬ್ಬರಿಂದ ಬೆರಳೆಣಿಕೆಯ ವಿದ್ಯಾರ್ಥಿಗಳೊಂದಿಗೆ  ಪ್ರಾರಂಭಿಸುತ್ತಾರೆ. ಆದರೆ ಇಂತಹ  ಸಂಘಟನೆಯೊಂದನ್ನು ಸಾಮಾಜಿಕ ಕ್ಷೇತ್ರದಲ್ಲಿ ಸಾಗರದಂತೆ ಬೆಳೆಸಿದ ಕೀರ್ತಿ ಮಾತ್ರ ಕೇಳ್ಕರ್ ಅವರಿಗೆ ಸಲ್ಲಬೇಕು.
ಮೂಲತಃ ಆರ್ ಎಸ್ ಎಸ್ ಪ್ರಚಾರಕರಾಗಿದ್ದ ಕೇಳ್ಕರ್ ಅವರು ಪುಣೆ ವಿಶ್ವವಿದ್ಯಾನಿಲಯದಲ್ಲಿ ಅಗ್ರ ಶ್ರೇಣಿಯಲ್ಲಿ  ಸಾಹಿತ್ಯದಲ್ಲಿ ಬಿ.ಎ ಪದವಿ ಪಡೆದವರು.
ಸಂಘ ಪ್ರಚಾರಕ ಜೀವನದ ನಂತರ ಮುಂಬೈ ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕರಾಗಿ ಕಾರ್ಯ ಪ್ರಾರಂಭಿಸುತ್ತಾರೆ.
ಅದೇ ಸಂದರ್ಭದಲ್ಲಿ ಎಬಿವಿಪಿಯೂ ತನ್ನ ಕಾರ್ಯವನ್ನು ಕ್ಯಾಂಪಸ್ ನಲ್ಲಿ ಪ್ರಾರಂಭಿಸಿದ್ದರಿಂದ ಕೇಳ್ಕರ್ ಅವರು ಎಬಿವಿಪಿಯ ನಗರ ಅಧ್ಯಕ್ಷರಾಗಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ.  ಅಲ್ಲಿಂದ ಪ್ರಾರಂಭವಾದ ಅವರ ಎಬಿವಿಪಿ ಜೊತೆಗಿನ ನಂಟು ಅತಿ ಶೀಘ್ರವಾಗಿ ಅವರು ರಾಜ್ಯಾಧ್ಯಕ್ಷರಾಗುವಂತೆ ಮಾಡಿತು.
1958 ರಿಂದಾಚೆಗೆ ಎಬಿವಿಪಿ ಬೆಳೆದು ಬಂದ ಪರಿಯ ಹಿಂದೆ ಇದ್ದದ್ದು ಯಶವಂತ ರಾವ್ ಕೇಳ್ಕರ್ ಎನ್ನುವ ಶಿಲ್ಪಿಯ ಶ್ರಮ.
ಕ್ಯಾಂಪಸ್ ಗಳಲ್ಲಿ ವಿದ್ಯಾರ್ಥಿ ಚುನಾವಣೆಯ ನೆಪದಲ್ಲಿ ರಾಜಕೀಯ ಪಕ್ಷಗಳು ಹಣ ಸುರಿಯುವುದನ್ನು ಪ್ರಬಲವಾಗಿ ವಿರೋಧಿಸುತ್ತಿದ್ದ ಕೇಳ್ಕರ್ ಅವರು ಜಾತಿ ಮುಕ್ತ ಸಮಾಜ ಕಟ್ಟುವ ಕನಸು ಹೊಂದಿದ್ದವರು.
'ಆದರ್ಶ ರಾಜ್ಯ ' ದ ಕಲ್ಪನೆಯಲ್ಲಿ ಅತೀವವಾದ ನಂಬಿಕೆ ಇಟ್ಟಿದ್ದ ಕೇಳ್ಕರ್ ಅವರು 70 ರ ದಶಕದಲ್ಲೇ   ಬ್ರಾಹ್ಮಣ ಕುಟುಂಬದಲ್ಲಿ ಹುಟ್ಟಿದ್ದರೂ   ದಲಿತ ಸಮುದಾಯದ ವಿದ್ಯಾರ್ಥಿಗಳು ತನ್ನ ಮನೆಯೊಳಗೆ ಹೋಗಿ ನೀರು ಕುಡಿಯುವಂತೆ ನಿರ್ದೇಶಿಸುತ್ತಿದ್ದರು.  ಯಾವತ್ತೂ ಯಾರನ್ನೂ ಜಾತಿ,  ವರ್ಗ,  ವರ್ಣದ ಕಾರಣಕ್ಕೆ ದೂರವಿಡಬಾರದು ಎನ್ನುವ ಅವರ ನಿಲುವನ್ನು ಇಂದಿಗೂ ಎಬಿವಿಪಿ ತನ್ನ ಬದ್ಧತೆ ಎಂಬಂತೆ ಪಾಲಿಸಿಕೊಂಡು ಬಂದಿದೆ. ಆ ಕಾರಣಕ್ಕಾಗಿಯೇ ಎಬಿವಿಪಿಯ ಯಾವುದೇ ಕಾರ್ಯಕರ್ತನಿಗೆ ತನ್ನ ಸಹ ಕಾರ್ಯಕರ್ತನ ಜಾತಿ ತಿಳಿದಿರುವುದಿಲ್ಲ.
ಹೋರಾಟಗಳಿಂದಲೇ ರೂಪಿತವಾದ ಸಂಘಟನೆಯೊಂದು ಸೈದ್ಧಾಂತಿಕವಾಗಿ ಇಷ್ಟು ಗಟ್ಟಿಯಾಗಿ ನಿಲ್ಲಲು ಕಾರಣ ಅದರ ಭದ್ರವಾದ ಬೇರು.
ಕೇಳ್ಕರ್  ಅವರಿಗೆ ಸಾಂಘಿಕ ಕಾರ್ಯದಲ್ಲಿದ್ದ ನಂಬಿಕೆ ವಿದ್ಯಾರ್ಥಿ ಸಮುದಾಯ ದೊಡ್ಡ ಮಟ್ಟದಲ್ಲಿ ಬೀದಿಗಿಳಿದು ಹೋರಾಡುವುದಕ್ಕೆ ಸ್ಫೂರ್ತಿ ನೀಡಿತು.
ಎಡ ಸಿದ್ದಾಂತ,  ನಕ್ಸಲ್ ವಾದಗಳ ಸಂಘಟನೆಗಳೇ ಶಾಲಾ ಕಾಲೇಜುಗಳಲ್ಲಿ ತುಂಬಿ ತುಳುಕುತ್ತಿದಾಗಲೇ
1975 ರ ತುರ್ತು ಪರಿಸ್ಥಿತಿ ವಿರೋಧಿಸಿ  10 ಸಾವಿರಕ್ಕೂ ಮಿಕ್ಕಿ ವಿದ್ಯಾರ್ಥಿಗಳು ಹೋರಾಟದಲ್ಲಿ ಜೈಲು  ಸೇರುತ್ತಾರೆ,  1978 ರಲ್ಲಿ 350 ಕ್ಕೂ ಹೆಚ್ಚು ಗ್ರಾಮಗಳಿಗೆ ಸಾವಿರಾರು  ವಿದ್ಯಾರ್ಥಿಗಳು ತೆರಳಿ ಜಾಗೃತಿ ಕಾರ್ಯದಲ್ಲಿ ತೊಡಗಿಸಿಕೊಂಡು "ಗ್ರಾಮೋತ್ಥಾನಕ್ಕಾಗಿ ವಿದ್ಯಾರ್ಥಿಗಳು " ಎಂಬ ಕಲ್ಪನೆಯನ್ನು ಸಾಕಾರಗೊಳಿಸುತ್ತಾರೆ.  ಇಂತಹ ನೂರಾರು ಸಾಮಾಜಿಕ ಪರಿವರ್ತನೆಯಲ್ಲಿ ವಿದ್ಯಾರ್ಥಿಗಳು ಧುಮುಕುವಂತೆ ಮಾಡುವುದರ ಹಿಂದೆ ಇದ್ದದ್ದು ಯಶವಂತ ರಾವ್ ಕೇಳ್ಕರ್ ಎನ್ನುವ ಶಿಲ್ಪಿ ಹಾಕಿದ ಅಡಿಗಲ್ಲು.
ಇಂದು ಜಾಗತಿಕ ಮಟ್ಟದಲ್ಲಿ ಎಬಿವಿಪಿ ತನ್ನ ಸೈದ್ದಂತಿಕ ಭೂಮಿಯನ್ನು ವಿಸ್ತರಿಸಿ ನಿಂತಿದೆ.
1991 ರಿಂದ ಯುವಕರನ್ನು ಸಮಾಜ ಸೇವೆಯತ್ತ ಸೆಳೆಯುವ ಕಾರಣಕ್ಕೆ "ಯಶವಂತ ರಾವ್ ಕೇಳ್ಕರ್ ಯುವ ಪುರಸ್ಕಾರ " ಪ್ರಶಸ್ತಿ ನೀಡಲಾಗುತ್ತಿದೆ.  ಆ ಮೂಲಕ ಕೋಟ್ಯಂತರ ಕಾರ್ಯಕರ್ತರನ್ನು ದೇಶಕ್ಕಾಗಿ ಬದುಕುವಂತೆ ಪ್ರೇರೇಪಿಸಿದ ಮಹಾನ್ ಚೇತನವನ್ನು ಚಿರಕಾಲ ನೆನೆಯುವ ಪ್ರಯತ್ನ ನಡೆಯುತ್ತಿದೆ.
ಇಂದು ಜಗತ್ತಿನ ಅತಿ ದೊಡ್ಡ ವಿದ್ಯಾರ್ಥಿ  ಸಂಘಟನೆಯನ್ನು ಸೈದ್ಧಾಂತಿಕವಾಗಿ ಕೆತ್ತಿದ ಯಶವಂತ ರಾವ್ ಕೇಳ್ಕರ್ ಎನ್ನುವ ಶಿಲ್ಪಿಯ ಜನ್ಮದಿನ.
ಅಂತಹ ಸಂಘಟನಾ ಶಾಸ್ತ್ರದ ಸೂತ್ರಕಾರನಿಗೊಂದು ನಮನ ಸಲ್ಲಿಸೋಣ..
✍️ ಕಾಳಿಕಾ ಛಾಯೆ 

Wednesday, April 1, 2020

ಮರ್ಯಾದಾ ಪುರುಷೋತ್ತಮನ ಜನ್ಮ ದಿನವಿಂದು... ನಾಮ ಜಪವೇ ನವಮಿಯಾಗಲಿ

ಮರ್ಯಾದ ಪುರುಷೋತ್ತಮನ ಜನ್ಮದಿನವಿಂದು... ನಿಜ ಶ್ರೀರಾಮನೆಂಬ ವ್ಯಕ್ತಿತ್ವವೇ ಅಂತದ್ದು... ಹಿಂದೂ ವಿರೋಧಿಗಳ ದೂಷಣೆಗೆ ಗುರಿಯಾಗುತ್ತಾˌ ಸದಾ ಆದರ್ಶಕ್ಕೆ ಉಪಮೆಯಾಗಿಹ ಏಕೈಕ ದೇವ  ಸಿಂಧು...  ಅದೆಷ್ಟೋ ಮಹಿಳಾ "ಓರಾಟಗಾರರ"ˌ ಸೋಕಾಲ್ಡ್ ಬುದ್ಧಿ ಜೀವಿಗಳ ನಾಮಕಾವಸ್ತೆಯ ಸ್ತ್ರೀವಾದಿ ತರ್ಕಗಳಿಗೆ ಎಳೆಯಲು ಸಿಗುವ ಮೊದಲ ಹೆಸರು ಅವನದ್ದು. ಅಗಸನ ಮಾತಿಗೆ ಸತಿಯನೆ ಅರಣ್ಯಕ್ಕಟ್ಟಿದನೆಂಬ ಅಪವಾದ ಹೊತ್ತು ಸಮರ್ಥನೆಯ ತರ್ಕಗಳನ್ನು ನಮ್ಮೆದುರು ಬಿಟ್ಟು ಹಸನ್ಮುಖಿಯಾಗಿ ನಿಂತವನು.
ನಿರಪರಾಧಿಯಾದ ಗರ್ಭಿಣಿ ಸತಿಯನ್ನು ನಿರ್ಧಯವಾಗಿ ಕಾಡಿಗಟ್ಟಿದವನುˌ ಕೊನೆಯ ತನಕವೂ ಸೀತೆಯೊಂದಿಗೆ ಬಾಳಲಾಗದೆ ಹೋದವನು ಎಂಬ ಬುದ್ದಿ ಜೀವಿಗಳ  ದೂಷಣೆಗಳ ಮಧ್ಯೆಯೂ ಇಂದಿಗೂ ಭಾರತೀಯ ಹೆಣ್ಣು ಮಕ್ಕಳು ಬೇಡುವುದು "ಶ್ರೀರಾಮಚಂದ್ರನಂತಹ ಗಂಡನಿಗೆ" ಎಂಬ ಒಂದೆ ವಿಷಯ ಸಾಕು ಆತನ ಸತಿ ಪ್ರೇಮದ ಸಾಕರವನ್ನು ಸಾಭೀತು ಪಡಿಸಲು. ಇಂದಿಗೂ ಆದರ್ಶ ಅಣ್ಣನಿಗೆ ಕನ್ನಡಿಯಾಗಿˌ ಪ್ರತಿ ತಂದೆಯೂ ಬಯಸುವ ಮಗನಿಗೆ ಉಪಮೆಯಾಗಿ ಕಾಣುವವನು ಆ ದಾಶರಥಿಯಷ್ಟೆ.
ಸೀತೆಯ ಪಾವಿತ್ರ್ಯವನ್ನು ಶಂಕಿಸಿದನೆಂದು  ಬೊಬ್ಬಿಡುವ ಕೆಲವು ಲಂಕಿಣಿಯರಿಗೆ ಎಂಜಲು ಬುಗುರಿಯ ತಿಂದು ಶಬರಿಯ ಭಕ್ತಿಗೆ ಸಾರ್ಥಕತೆ ಕೊಟ್ಟˌ ಅಹಲ್ಯೆಯ ಶಾಪಕೆ ಮುಕ್ತಿಯನಿತ್ತ ಜಾನಕೀರಾಮನೇಕೆ ಕಾಣುವುದಿಲ್ಲ?
ಸಾಮಾನ್ಯ ಮನುಷ್ಯನೊಬ್ಬ ಅಸಾಮಾನ್ಯ ಆದರ್ಶಗಳನ್ನು ಪಾಲಿಸಬಹುದೆಂಬ ಸಂದೇಶವನ್ನ ಮನುಕುಲದ ಸಹಸ್ರ ಶತಮಾನಗಳಿಗೆ ಸಾರಿದವನವನು..
ಅಷ್ಟಲ್ಲದೆ ಹೋಗಿದ್ದರೆ ಒಂದು ರಾಮ ಮಂದಿರಕ್ಕಾಗಿ ಇಷ್ಟೆಲ್ಲಾ ಹೋರಾಡುತ್ತಿದ್ದೆವೆ????
ಕೊರೋನಾ ಎಂಬ ಮಹಾಮಾರಿ ಇಲ್ಲದೆ ಹೋಗಿದ್ದರೆ ಈ ಬಾರಿಯ ರಾಮ ನವಮಿ ಇತಿಹಾಸದ ಸುವರ್ಣ ಪುಟದಲ್ಲಿ ಅಚ್ಚಾಗುತ್ತಿತ್ತು.
ಈ  ಬಾರಿ ಮನೆಯಲ್ಲಿ ರಾಮನಾಮದ ಮೂಲಕವೇ ರಾಮ ನವಮಿಯ ಸಂಭ್ರಮ ಹೆಚ್ಚಿಸೋಣ
"ರಾಮನ ಪಾದದ ಮೇಲಾಣೆ
ಮಂದಿರ ನಿರ್ಮಾಣ ಅಲ್ಲೇನೆ"
#ramananavami #rammandir #shriram

Sunday, March 29, 2020

ದೇಶದ ನೋವನ್ನು ಮರೆಸಲು ಹೆರಿಗೆ ನೋವನ್ನೂ ನುಂಗಿದ ಮಹಾ ತಾಯಿ

ಕೊರೋನಾ ಎಂಬ ಮಹಾಮಾರಿ ದಿನೇ ದಿನೇ ಈ  ಜಗತ್ತನ್ನು ಆವರಿಸಿಕೊಳ್ಳುತ್ತಿದೆ.  ಚೀನಾ ಬಯೋ ವಾರ್ ಮಾಡುತ್ತಿದೆ ಎನ್ನುವ ಆರೋಪಗಳು ಕೇಳಿಬರುತ್ತಿವೆ.  ಅಮೇರಿಕಾ ಅಧ್ಯಕ್ಷರಂತೂ ಕೊರೊನ ವೈರಸ್ ಅನ್ನು ಚೀನಾ ವೈರಸ್ ಎಂದೇ ಕರೆದು ಪರೋಕ್ಷವಾಗಿ ಚೀನಾವನ್ನು ಗುರಿ ಮಾಡುತ್ತಿದ್ದಾರೆ.  ಇನ್ನೂ ಕೆಲವು ಸಂಸ್ಥೆಗಳು ಕೊರೊನದಿಂದಾದ ನಷ್ಟಕ್ಕೆ ಚೀನಾ ಕಾರಣವೆಂದು ಆ ನಷ್ಟ ತುಂಬಿಕೊಡುವಂತೆ ಚೀನಾ ವಿರುದ್ಧ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಮೊಕದ್ದಮೆಯನ್ನೂ ಹೂಡಿವೆ.
 ಇಷ್ಟೆಲ್ಲಾ ನಡೆದರೂ ತನ್ನದೇ ದೇಶದಲ್ಲಿ ಹುಟ್ಟಿದ  ಮಹಾಮಾರಿಯನ್ನು ಹತ್ತಿಕ್ಕಲಾಗದೆ ಒದ್ದಾಡುತ್ತಿದ್ದರೂ ಜಗತ್ತಿನೆದುರು ಎಲ್ಲಾ ಚೆನ್ನಾಗಿದೆ ಎಂದು ತೋರಿಸಿಕೊಳ್ಳುತ್ತಿರುವ ಚೀನಾ ಈಗ ಜಗತ್ತಿಗೆ ತುರ್ತಾಗಿ ಬೇಕಿರುವ  ಕೊರೋನಾ ತಪಾಸಣಾ ಕಿಟ್ ಗಳನ್ನು ಸರಬರಾಜು ಮಾಡುವುದಾಗಿ ಹೇಳಿಕೊಂಡಿದೆ.  ಅದಕ್ಕೆ ಪೂರಕವಾಗಿ   ಫ್ರಾನ್ಸ್ ಸೇರಿದಂತೆ ಹಲವು ರಾಷ್ಟ್ರಗಳೊಂದಿಗೆ ದುಬಾರಿ ಬೆಲೆಗೆ  ಈ ಕಿಟ್ ಗಳನ್ನು ಕೊಡುವುದಾಗಿ ಒಪ್ಪಂದವನ್ನೂ ಮಾಡಿಕೊಂಡಿದೆ.
ಈ ಕೊರೋನಾ ಇಷ್ಟು ವೇಗವಾಗಿ ಹರಡುವುದಕ್ಕೆ ಕಾರಣವೆ ಇದನ್ನು ಪರೀಕ್ಷಿಸಿ ದೃಢಪಡಿಸುವ ವ್ಯವಸ್ಥೆ ವೇಗವಾಗಿ ಆಗದೆ ಇರುವ ಕಾರಣ.
ಒಬ್ಬ ವ್ಯಕ್ತಿಗೆ ಕೊರೋನಾ ಸೋಂಕು ತಗುಲಿದರೆ ಅದರ ಗುಣಲಕ್ಷಣಗಳು ಕಾಣಿಸಿಕೊಳ್ಳಲು ಕನಿಷ್ಠ 3-4 ದಿನಗಳು ಬೇಕು.  ಅಲ್ಲಿಂದ ಆ ವ್ಯಕ್ತಿಯ ಗಂಟಲು ದ್ರವವನ್ನು ಪರೀಕ್ಷೆಗೆ ಕಳಿಸಿದರೆ  ಅದರ ಪರೀಕ್ಷೆ ಮಾಡಲು ಸುಮಾರು 7-8 ಗಂಟೆ ಸಮಯ ತೆಗೆದುಕೊಳ್ಳುತ್ತದೆ.  ಅಲ್ಲಿಂದ ರಿಪೋರ್ಟ್ ಬರುವುದಕ್ಕೆ ಮತ್ತೆ 2-3 ದಿನ ಹಿಡಿಯುತ್ತದೆ.  ಹೀಗೆ ಒಬ್ಬ ಕೊರೋನಾ ಸೋಂಕಿತನನ್ನು  ಕಂಡು ಹಿಡಿಯಲು ಕನಿಷ್ಠ 8-10 ದಿನಗಳ ಸಮಯ ತಗುಲುತ್ತದೆ. ಅಷ್ಟರಲ್ಲಿ ಆತ ಇನ್ನೂ ನೂರು ಮಂದಿಗೆ ಆ ಸೋಂಕನ್ನು ತಗುಲಿಸಿರುತ್ತಾನೆ. ಇದಕ್ಕೆ ಕಾರಣ ಕೊರೋನಾ ತಪಾಸಣಾ ಸಲಕರಣೆಗಳ ಕೊರತೆ.   ಭಾರತದಲ್ಲಂತೂ ಈ ಸಮಸ್ಯೆ ಬೇರೆ ದೇಶಗಳಿಗೆ ಹೋಲಿಸಿದರೆ ತುಸು ಹೆಚ್ಚೇ ಇದೆ.  ಪುಟ್ಟ ರಾಷ್ಟ್ರ ದಕ್ಷಿಣ ಕೊರಿಯದಲ್ಲೇ 650 ಲ್ಯಾಬೊರೇಟರಿ ಗಳು ಇರುವಾಗ 130 ಕೋಟಿ ಜನಸಂಖ್ಯೆ ಹೊಂದಿರುವ ಭಾರತದಲ್ಲಿ 118 ಸರ್ಕಾರಿ ಹಾಗೂ 50 ಖಾಸಗಿ ಲ್ಯಾಬೊರೇಟರಿ ಗಳಿವೆಯಷ್ಟೇ.   ಹಾಗಾಗಿ ಇದುವರೆಗೂ ನಮ್ಮ ದೇಶದಲ್ಲಿ ಕೊರೋನಾ ಸೋಂಕಿತ ವ್ಯಕ್ತಿಯ ಸಂಪರ್ಕದಲ್ಲಿ ಬಂದವರನ್ನಷ್ಟೇ ಪರೀಕ್ಷೆಗೊಳಪಡಿಸಲಾಗುತ್ತಿತ್ತು ಈಗ ತೀವ್ರ ಉಸಿರಾಟದ ಸಮಸ್ಯೆಯಿಂದ ಆಸ್ಪತ್ರೆಗೆ  ದಾಖಲಾಗುವ ಎಲ್ಲರನ್ನೂ ಪರೀಕ್ಷಿಸುವಂತೆ  ಆದೇಶಿಸಲಾಗಿದೆ. ಆದರೂ  ಇದು ವಿಶ್ವದ ಪರೀಕ್ಷಾ ಸರಾಸರಿಗೆ ಹೋಲಿಸಿದರೆ ಭಾರತದಲ್ಲಿ ಅತ್ಯಂತ ಕಡಿಮೆ ಅಂದರೆ  ಒಂದು ದಶಲಕ್ಷದಲ್ಲಿ ಸರಾಸರಿ 6.8 ರಷ್ಟು ಮಂದಿಯನ್ನು ಮಾತ್ರ ಪರೀಕ್ಷೆಗೊಳಪಡಿಸಲಾಗುತ್ತಿದೆ.
ಈ ಸಂಕಷ್ಟದ ನಡುವೆ ಭಾರತಕ್ಕೊಂದು ಆಶಾ ಕಿರಣ ಮೂಡಿದೆ.  ಜಗತ್ತು ಕೊರೋನಾ ತಪಾಸಣಾ ಕಿಟ್ ಗಾಗಿ ಚೀನಾದ ಎದುರು ಮಂಡಿಯೂರುವ ಪರಿಸ್ಥಿತಿಯಲ್ಲಿದ್ದರೆ ಭಾರತದ ವಿಜ್ಞಾನಿಗಳು ಸದ್ದಿಲ್ಲದೇ ಈ ಕಿಟ್ ಗಳನ್ನು ತಯಾರಿಸಿ ಮಾರುಕಟ್ಟೆಗೆ ಬಿಡಲು ಸಿದ್ದರಾಗಿದ್ದಾರೆ.
ಪುಣೆಯ ಮೈಲ್ಯಾಬ್ ಡಿಸ್ಕವರಿ ಎನ್ನುವ ಸಂಸ್ಥೆ ಕಳೆದ ಗುರುವಾರ ಭಾರತದ ಸ್ವದೇಶಿ  ಪ್ರಥಮ ಕೊರೋನಾ ಪರೀಕ್ಷಾ ಕಿಟ್ ಅನ್ನು  ತಯಾರಿಸಿ ಇಂಡಿಯನ್ ಕೌನ್ಸಿಲ್ ಫಾರ್ ಮೆಡಿಕಲ್ ರಿಸರ್ಚ್ ನ ಅಡಿಯಲ್ಲಿ ಕಾರ್ಯನಿರ್ವಹಿಸುವ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ ಯಿಂದ ನೂರು ಪ್ರತಿಶತ ಫಲಿತಾಂಶದೊಂದಿಗೆ ಮಾರುಕಟ್ಟೆಗೆ ಕಾಲಿಟ್ಟಿದೆ. ಈ ಸಿಹಿ ಸುದ್ದಿಯ ಹಿಂದೆ ದೇಶವೇ ಹೆಮ್ಮೆ ಪಡುವಂತಹ ಭಾವನಾತ್ಮಕ ಸಂಗತಿಯೊಂದಿದೆ.
  ಈ
ಕೊರೋನಾ ವೈರಸ್ ಪರೀಕ್ಷಾ ಕಿಟ್ ಅರ್ಥಾತ್ ಪ್ಯಾಥೋ ಡಿಟೆಕ್ಟ್ ಅನ್ನು ಕಂಡು ಹಿಡಿದ ತಂಡವನ್ನು ಮುನ್ನಡೆಸಿದ ಮೈಲ್ಯಾಬ್ ರಿಸರ್ಚ್ ಆಂಡ್ ಡೆವಲಪ್ಮೆಂಟ್ ಸಂಸ್ಥೆಯ ಮುಖ್ಯಸ್ಥೆ  ಮಿನಾಲ್ ದಿಖಾವೆ ಬೋಸ್ಲೆ ಎನ್ನುವ ಹೆಣ್ಣುಮಗಳೆ ಆ ಹೆಮ್ಮೆಗೆ ಕಾರಣ.  ಯಾಕೆಂದರೆ ತುಂಬು ಗರ್ಭಿಣಿಯಾಗಿದ್ದ ಮಿನಾಲ್ 3 ರಿಂದ 4 ತಿಂಗಳು ತಗಲುವ ಕಿಟ್ ಡೆವಲಪ್ಮೆಂಟ್ ಕಿಟ್ ಡೆವಲಪ್ಮೆಂಟ್ ಕೆಲಸವನ್ನು ಕೇವಲ ಆರು ವಾರಗಳಲ್ಲಿ ಮುಗಿಸಿದ್ದಾರೆ.  ಈಕೆ ಕಳೆದ ವಾರವಷ್ಟೇ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ಕೊಟ್ಟಿದ್ದಾಳೆ.  ಕಳೆದ ಫೆಬ್ರುವರಿಯಲ್ಲಿ  ತನ್ನ ಹೆರಿಗೆಗೆ ದಿನ ಎಣಿಸುತ್ತಿರುವಾಗಲೇ ಕೊರೋನಾ ದೇಶವನ್ನು ವ್ಯಾಪಿಸಿಕೊಂಡು ಕೊರೋನಾ ಪರೀಕ್ಷಾ  ಕಿಟ್ ತಯಾರಿಕೆಯ ಜವಾಬ್ದಾರಿ ಇವರ ಹೆಗಲ ಮೇಲೆ ಬೀಳುತ್ತದೆ.   ಗರ್ಭದೊಳಗೆ ಪುಟ್ಟ ಕಂದಮ್ಮನನ್ನು ಹೊತ್ತು ದೇಶದ ಜನರ ಆರೋಗ್ಯದ ಹೊಣೆಯನ್ನೂ ಹೊತ್ತು ರಾಷ್ಟ್ರ ಕಾರ್ಯಕ್ಕೆ ತಮ್ಮನ್ನು ತೊಡಗಿಸಿಕೊಂಡು ಹೆರಿಗೆಗೆ ತೆರಳುವ ಕೇವಲ ಒಂದೇ ಒಂದು ದಿನದ ಮುಂಚೆ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿಗೆ   ಮೌಲ್ಯಮಾಪನಕ್ಕಾಗಿ ಕಿಟ್ ಗಳನ್ನು ಹಸ್ತಾಂತರಿಸಿದ್ದಾರೆ. ಮರುದಿನ ತಾನು ಹೆರಿಗೆ ಕೊಠಡಿಗೆ ತೆರಳುವ ಒಂದು ಗಂಟೆಯ ಮುನ್ನ ಇಂಡಿಯನ್ ಡ್ರಗ್ ಕಂಟ್ರೋಲ್ ಅಥಾರಿಟಿ ಸಿಡಿಎಸ್ ಸಿಓ ಸಂಸ್ಥೆಗೆ ಅನುಮತಿಗಾಗಿ ತಮ್ಮ ಪ್ರಾಜೆಕ್ಟ್ ನ ಪ್ರಪೋಸಲ್ ಅನ್ನು ಮಂಡಿಸುತ್ತಾರೆ. ಅಬ್ಬಾ ಅಂದೆಂತಹ ಧೀ ಶಕ್ತಿ.... ಇದಲ್ಲವೇ ದೇಶದ ಬಗೆಗಿನ ಕಾಳಜಿ..  ದೇಶದ ಜನರ ಆರೋಗ್ಯಕ್ಕಾಗಿ ಹೆರಿಗೆ ನೋವನ್ನು ನುಂಗಿ ತನ್ನ ಜವಾಬ್ದಾರಿಯನ್ನು ನಿಭಾಯಿಸಿದ ಇಂತಹ ದಿಟ್ಟ ಹೆಣ್ಣುಮಕ್ಕಳು ನಿಜಕ್ಕೂ ಈ ನೆಲದ ಹೆಮ್ಮೆಯೇ ಸರಿ.
ಈ ದೇಶದ ಪರಂಪರೆಯೇ ಹಾಗೆ ನೋಡಿ... ರಾಷ್ಟ್ರ ಸಂಕಷ್ಟದಲ್ಲಿದ್ದಾಗಲೆಲ್ಲ ತನ್ನ ವೈಯಕ್ತಿಕ ನೋವು ನಲಿವುಗಳನ್ನು ಮರೆತು ಹೋರಾಡುವುದು ಈ ನೆಲದ ಇತಿಹಾಸದಲ್ಲಿ ಹಾಸುಹೊಕ್ಕಾಗಿದೆ. ಇಂತವರಿಗಾಗಿಯೇ ನಮ್ಮ ಪ್ರಧಾನಿ ಅಂದು ಚಪ್ಪಾಳೆ ತಟ್ಟಲು ಹೇಳಿದ್ದು.
ಅಂದ ಹಾಗೆ ಮಿನಾಲ್ ದಾಖ್ವೆ  ಬೋಸ್ಲೆ  ಮತ್ತು ಅವರ ತಂಡ ತಯಾರಿಸಿರುವ ಈ ಕಿಟ್ ನಲ್ಲಿ ಏಕ ಕಾಲಕ್ಕೆ ನೂರು ಮಂದಿಯನ್ನು ಪರೀಕ್ಷಿಸಬಹುದು.  ಮತ್ತು ಈ  ಕಿಟ್ ಗೆ ತಗುಲುವ ವೆಚ್ಚ ಕೇವಲ 1200 ರೂಪಾಯಿಗಳು.  ಆದರೆ ಇದೆ ಕಿಟ್ ಅನ್ನು ಭಾರತ ವಿದೇಶಗಳಿಂದ ಆಮದು ಮಾಡಿಕೊಳ್ಳುವುದಕ್ಕೆ ತಗುಲುತ್ತಿದ್ದ ವೆಚ್ಚ ಬರೋಬ್ಬರಿ ಪ್ರತಿ ಕಿಟ್ ಗೆ 4500 ರೂಪಾಯಿಗಳು.   ಅಷ್ಟೇ ಅಲ್ಲ ವಿದೇಶಿ ಕಿಟ್ ಗಳಲ್ಲಿ ಪರೀಕ್ಷೆ ನಡೆಸಲು 6 ರಿಂದ 7 ಗಂಟೆ ಸಮಯ ಬೇಕಿತ್ತು.  ಆದರೆ ಈ  ಕಿಟ್ ನಿಂದ ಕೇವಲ ಎರಡೂವರೆ ಗಂಟೆಗಳಲ್ಲಿ ಪರೀಕ್ಷೆ ನಡೆಸಬಹುದು. ಈಗಾಗಲೇ ಮೈಲ್ಯಾಬ್ ಸಂಸ್ಥೆ ಮೊದಲ ಹಂತದಲ್ಲಿ 150 ಕಿಟ್ ಗಳನ್ನು ಪುಣೆ ಸೇರಿದಂತೆ ಮುಂಬೈ, ದೆಹಲಿ,  ಗೋವಾ ಮತ್ತು ಬೆಂಗಳೂರಿನ ಲ್ಯಾಬ್ ಗಳಿಗೆ ಕಳುಹಿಸಿಕೊಟ್ಟಿದೆ. ಮತ್ತು ಈ  ವಾರಾಂತ್ಯದಲ್ಲಿ ಕೆಲಸ ಮುಂದುವರೆಸಿರುವ ಸಂಸ್ಥೆ ಸೋಮವಾರ ಮತ್ತೊಂದು ಹಂತದಲ್ಲಿ ಕಿಟ್ ಗಳನ್ನು ವಿತರಿಸಲಿದೆ.
ಇದರೊಂದಿಗೆ ಹೆಚ್ ಐ ವಿ,  ಹೆಪಾಟೈಟಿಸ್ ಬಿ,  ಸಿ ಸೇರಿದಂತೆ ಹಲವು ರೋಗಗಳನ್ನು ಪತ್ತೆ ಹಚ್ಚುವ ಪರೀಕ್ಷಾ ಕಿಟ್ ಗಳನ್ನು ತಯಾರಿಸಿರುವ  ಮೊಲಿಕ್ಯುಲಾರ್ ಡಯಗ್ನೊಸ್ಟಿಕ್ ಕಂಪನಿ 1 ಲಕ್ಷ ಕೊರೋನಾ ಪರಿಕ್ಷಾ ಕಿಟ್ ಗಳನ್ನು ಪೂರೈಸುವುದಾಗಿ ಹೇಳಿದ್ದು ಅಗತ್ಯ ಬಿದ್ದಲ್ಲಿ 2 ಲಕ್ಷ ಕಿಟ್ ಗಳನ್ನು ತಯಾರಿಸುವುದಾಗಿ ಹೇಳಿದೆ.
ಇದು ಭಾರತ ಕೊರೋನಾ ಎಂಬ ಹೆಮ್ಮಾರಿಯ ವಿರುದ್ಧ  ಹೊರಾಡಲು ತಯಾರಾದ ಪರಿ.  ನಾವೆಲ್ಲ 21 ದಿನ ಸುಮ್ಮನೆ ಮನೆಯಲ್ಲಿ ಕುಳಿತುಕೊಳ್ಕುವುದಕ್ಕೆ ಪರದಾಡುತ್ತಿದ್ದರೆ ಅಲ್ಲಿ ಮಿನಾಲ್ ದಾಖ್ವೆ ಯಂತಹ ಅದೆಷ್ಟೋ ಮಂದಿ ನಮಗಾಗಿ ತಮ್ಮ ಬದುಕನ್ನೇ ಪಣವಾಗಿಟ್ಟು ಹೋರಾಡುತ್ತಿದ್ದಾರೆ.  ಅಂತವರಿಗಾಗಿ ನಮ್ಮದೊಂದು ಪ್ರಾರ್ಥನೆ ಇರಲಿ.
✍ಕಾಳಿಕಾ ಛಾಯೆ

Saturday, March 28, 2020

21 ದಿನದ ಕೊರೋನಾ ಗೃಹಬಂಧನವನ್ನು ಎದುರಿಸುವುದು ಹೇಗೆ?

ಕೊರೋನಾ ಎಂಬ ಮಹಾಮಾರಿ ಜಗತ್ತನ್ನು ಹಿಂಡಿ ಹಿಪ್ಪೆ ಮಾಡುತ್ತಿದೆ.  ಈ ಸಂದರ್ಭ ದೇಶವಾಸಿಗಳನ್ನು ರಕ್ಷಿಸುವುದಕ್ಕಾಗಿ ಈ ದೇಶದ ಪ್ರಧಾನಿ ನರೇಂದ್ರ ಮೋದಿಜೀ  21 ದಿನದ Lockdown ಘೋಷಿಸಿದ್ದಾರೆ. 21 ದಿನ ಮನೆಯೊಳಗೇ ಕುಳಿತು ಮಾಡುವುದಾರೂ ಏನು ಎಂಬ ಪ್ರಶ್ನೆ ಸಹಜವಾಗಿಯೇ ಮೂಡುತ್ತದೆ. ಈ 21 ದಿನ ಎಲ್ಲರೂ ಗೃಹಬಂಧನವನ್ನು ಎದುರಿಸಲೇಬೇಕು. ಹಾಗೆಂದು ಸುಮ್ಮನೆ ಕುಳಿತು ಬಿಟ್ಟರೆ ಕೊರೊನಗಿಂತ ದೊಡ್ಡ ಶತ್ರು ಆಲಸ್ಯ ನಮ್ಮನ್ನು ಕೊಂದು ಬಿಡುತ್ತದೆ. ಅದಕ್ಕಾಗಿ ಒಂದಷ್ಟು ಯೋಜನೆಗಳನ್ನು ಮಾಡಿಕೊಳ್ಳಲೇ ಬೇಕಿದೆ. ಅದಕ್ಕಾಗಿಯೇ ಇಲ್ಲೊಂದಷ್ಟು ಸಲಹೆ ನೀಡಿದ್ದೇನೆ ನೀವು ಪ್ರಯತ್ನಿಸಿ. ಹಿಂದೂ ಸಂಪ್ರದಾಯದಲ್ಲಿ 21 ದಿನಕ್ಕೆ ಬಹಳ ಪ್ರಾಮುಖ್ಯತೆ ಇದೆ.  21 ದಿನ ಯಾವುದೇ ಕಾರ್ಯವನ್ನು ಎಡೆಬಿಡದೆ ಮಾಡಿಕೊಂಡು ಬಂದರೆ ನಂತರ ಅದು ನಿರಂತರವಾಗಿ ಮುಂದುವರಿಸಿಕೊಂಡು ಹೋಗಲು ರೂಢಿಯಾಗಿ ಬಿಡುತ್ತದಂತೆ.
ಜಪ-ತಪ,  ಧ್ಯಾನ ಯೋಗದಂತಹ ಅಭ್ಯಾಸಗಳನ್ನು ಮಾಡುವ ಆಸಕ್ತಿ ಇರುವವರು 21 ದಿನ ಮನೆಯಲ್ಲೇ ಇರುವುದರಿಂದ ತಕ್ಷಣವೇ ಪ್ರಾರಂಭಿಸಿ.  ಮತ್ತೆ ತಾನಾಗಿಯೇ ಅದು ಮುಂದುವರಿಸಿಕೊಂಡು
ಹೋಗಲು ಸಮಯವನ್ನು ಹೊಂದಿಸಿಕೊಳ್ಳುವಂತೆ ಮಾಡುತ್ತದೆ.
ಬೆಳಗ್ಗೆ ಬೇಗ ಏಳುವ ಅಭ್ಯಾಸ ಮಾಡಿಕೊಳ್ಳಬೇಕು ಅಂತ ಪ್ರಯತ್ನಿಸುತ್ತಿರುವವರು ಈ 21 ದಿನ ಮನೆಯವರ ಬಳಿ ತಪ್ಪದೆ ಬೇಗ ಎಬ್ಬಿಸುವುದಕ್ಕೆ ಹೇಳಿ 21 ದಿನದ ಬಳಿಕ ನಿಮ್ಮ ದೇಹ ಮತ್ತು ಮನಸ್ಸು ಬೇಗ ಏಳುವುದಕ್ಕೆ ಒಗ್ಗಿಕೊಂಡು ಬಿಡುತ್ತದೆ.  ನಂತರ ನೀವು ತಡವಾಗಿ ಏಳಬೇಕೆಂದರೂ ನಿದ್ರೆ ಬರುವುದಿಲ್ಲ.
ಬಹಳ ಜನರಿಗೆ ನಿತ್ಯ ಕೆಲಸದ ಒತ್ತಡದಲ್ಲಿ ಹೊರಗಿನ ಜಂಕ್ ಫುಡ್ ಗಳನ್ನು ತಿಂದು ದೇಹದ  ನಿಯಂತ್ರಣ ಮೀರಿ ಬೊಜ್ಜು ಆವರಿಸಿಕೊಂಡಿರುತ್ತದೆ.  21 ದಿನ ಮನೆಯಲ್ಲೇ ಇರುವುದರಿಂದ  ಆಹಾರದಲ್ಲಿ ನಿಯಂತ್ರಣವಿರಿಸಿಕೊಂಡು ವ್ಯಾಯಾಮಕ್ಕೂ ಆರಾಮವಾಗಿ  ಸಮಯ ಕೊಟ್ಟು ನಿಮ್ಮ ದೇಹದ ಆರೈಕೆ ಮಾಡಿಕೊಳ್ಳಿ.
21 ದಿನ ಅಡುಗೆ ಕಲಿಯುವವರಿಗೆ ಸುವರ್ಣ ದಿನ ಕೂಡ.
ಹೆಣ್ಣುಮಕ್ಕಳು  ದಿನ ಕೆಲಸದ ಒತ್ತಡ,  ವಾಷ್ ರೂಮ್ ಗೆ ಹೋಗಬೇಕಾಗುತ್ತದೆ ಅನ್ನುವ ಕಾರಣಗಳಿಂದ ನೀರು ಕುಡಿಯುವುದನ್ನು ಕಡಿಮೆ ಮಾಡಿರುತ್ತೀರಿ. ಈ  21 ದಿನ ಅದೆಲ್ಲದರ ಚಿಂತೆ ಬಿಟ್ಟು  ದಿನಕ್ಕೆ ಅರ್ಧ ಘಂಟೆಗೊಮ್ಮೆ  ಅಲಾರಾಂ ಇಟ್ಟುಕೊಂಡು
6 ಲೀಟರ್ ನೀರು ಕುಡಿಯಿರಿ. 21 ದಿನದಲ್ಲಿ ಮುಖದ ಕಲೆ,  ಮೊಡವೆಗಳೆಲ್ಲ ಮಾಯವಾಗಿರುತ್ತದೆ.
ಹೊಸ ಕರಕುಶಲ ಕಲೆ ಕಲಿಯುವ ಆಸಕ್ತಿ ಇರುವವರು ಈ 21 ದಿನ ಯೂ ಟ್ಯೂಬ್ ವಿಡಿಯೋ ನೋಡಿ ಅದನ್ನು ಪ್ರಯತ್ನಿಸಿ.
ಕೆಲಸದ ಒತ್ತಡದಲ್ಲಿ ಮರೆತೇ ಬಿಟ್ಟಿದ್ದ ನಿಮ್ಮ ಹಳೆಯ ಹವ್ಯಾಸಗಳಿಗೆ ಮತ್ತೆ ಚಾಲನೆ ಕೊಡಿ.
ಇನ್ನುಳಿದಂತೆ ಧೂಳು ಹಿಡಿದ ಪುಸ್ತಕಗಳನ್ನು ಒರೆಸಿ ಮಸ್ತಕದೊಳಗೆ ತುಂಬಿಸಿಕೊಳ್ಳುವ ಪ್ರಯತ್ನ ಮಾಡಿ.
ಹೊಸ ಬಿಸಿನೆಸ್ ಮಾಡಬೇಕು ಅಂತ ಆಸೆ ಇಟ್ಟುಕೊಂಡವರು ಈ 21 ದಿನ ಅದಕ್ಕೆ ಸಂಬಂಧಿಸಿದಂತೆ ಒಂದಷ್ಟು ಅಧ್ಯಯನ ಮಾಡಿ ಮಾಹಿತಿ ಕಲೆ ಹಾಕಿ..  ಆನ್ ಲೈನ್ ನಲ್ಲೆ ಅದರ ಸರ್ವೇ ಮಾಡಿಕೊಳ್ಳಿ.
ಹಾ..  ಎಲ್ಲಕ್ಕಿಂತ ಹೆಚ್ಚಾಗಿ ಈ 21 ದಿನದಲ್ಲಿ ನಿಮ್ಮ ಸಂಬಂಧಿಕರು,  ಸ್ನೇಹಿತರಿಗೆ ಕರೆ ಮಾಡಿ ಮಾತನಾಡಿ. ಜೀವನದಲ್ಲಿ ಹಿಂದೆಂದೂ ನೀವು ಹೀಗೆ ಬದುಕಿರಲಿಕ್ಕಿಲ್ಲ. ( ನಮ್ಮ ಹಿರಿಯರು ಪ್ಲೇಗ್ ಬಂದಾಗ  ಇದನ್ನು ಅನುಭವಿಸಿರಬಹುದು. ಆದರೆ ನಮ್ಮ ಪೀಳಿಗೆಗೆ ಇದು ಹೊಸ ಅನುಭವ ) ಮುಂದೆ ಇಂತಹ ಪರಿಸ್ಥಿತಿ ಬರುವುದೂ ಬೇಡ. ಬಂದ ಸಂಕಷ್ಟವನ್ನು ಸಕಾರಾತ್ಮಕವಾಗಿ ಬಳಸಿಕೊಂಡು ಮುಂದೆ ಸಾಗುವುದೇ ಜೀವನ. ಯಾವುದೊ ರೋಗವನ್ನು,  ಸರ್ಕಾರವನ್ನು,  ಇನ್ಯಾವುದೋ ದೇಶವನ್ನು ಶಪಿಸಿಕೊಳ್ಳುತ್ತಾ ಕೂರುವುದರ ಬದಲು ಪ್ರಕೃತಿ ನಮ್ಮನ್ನು ನಾವು ಅರಿತುಕೊಳ್ಳುವುದಕ್ಕೆ ಒಂದು ಅವಕಾಶ ಕೊಟ್ಟಿದೆ ಎಂದೇ ಭಾವಿಸೋಣ.
ಇದರ ನಡುವೆ ದಿನಗೂಲಿಯನ್ನೇ ನಂಬಿ ಬದುಕುತ್ತಿರುವ ಅಕ್ಕ ಪಕ್ಕದವರಿಗೆ ಇರುವುದರಲ್ಲೇ ಸ್ವಲ್ಪ ಅಕ್ಕಿ ಬೇಳೆ ಕೊಟ್ಟು ವಿಪತ್ತಿನಲ್ಲಿ ಮಾನವರಾಗುವ ಅವಕಾಶ ಪಡೆದುಕೊಳ್ಳೋಣ. ಮನೆಯಲ್ಲೇ ಇದ್ದೇವೆ ಅಂತ ದಿನಕ್ಕೆ ನಾಲ್ಕು ಬಾರಿ  ರುಚಿ ರುಚಿಯಾಗಿ ತಿಂಡಿ ತಿನಿಸು ಮಾಡಿ ತಿನ್ನುವುದಕ್ಕೆ ಸ್ವಲ್ಪ ನಿಯಂತ್ರಣ ಹಾಕಿಕೊಳ್ಳಿ. ಯಾಕೆಂದರೆ ಈಗಾಗಲೇ ದಾಸ್ತಾನು ಇರುವ ಅಗತ್ಯ ವಸ್ತುಗಳನ್ನು ಬಾಯಿ ಚಪಲಕ್ಕೆ ಖಾಲಿ ಮಾಡಿಕೊಂಡರೆ ಮುಂದೆ ಸಮಸ್ಯೆಯಾಗಬಹುದು. ಎಚ್ಚರವಿರಲಿ.
ಎಲ್ಲರಿಗೂ ಶುಭವಾಗಲಿ.
#IndiaLockDown
#Corona
#stayHomeStaySafe