Saturday, May 9, 2020

ಮಾವು, ಹಲಸು ಅಂದರೆ ಕರಾವಳಿ, ಮಲೆನಾಡಿಗರಿಗೆ ಕೇವಲ ಹಣ್ಣಲ್ಲ.. ಭಾವನೆಗಳ ಹೂರಣ

ಅಂಗಳದಲ್ಲಿ ಕುಕ್ಕುರುಗಾಲಲ್ಲಿ ಕೂತುಕೊಂಡು ಒಂದು ಡಜನ್ ಕೆಂಪು ಹಸಿರು ಗಚ್ಚಿನ ಬಳೆ ಹಾಕಿದ ನೆರಿಗೆ ಕಟ್ಟಿದ ಕೈಗಳಿಂದ ಕಾಟು ಮಾವಿನ ಸಿಪ್ಪೆ ತೆಗೆದು ಗೆರಸಿ ಮೇಲೆ ಪ್ಲಾಸ್ಟಿಕ್ ಇಟ್ಟು ಅದಕ್ಕೆ ರಸವನ್ನೆಲ್ಲ ಹಿಂಡಿ ಬಸಳೆ ಚಪ್ಪರದ ಮೇಲೆ ಬಿಸಿಲಿಗೆ ಇಟ್ಟು ಮಳೆಗಾಲಕ್ಕೆ ಚಟ್ನಿ ಅರೆಯುವುದಕ್ಕಂತಲೇ "ಹಣ್ಣು ಚೊಟ್ಟು " ಮಾಡಿಡುತ್ತಿದ್ದ ಅಜ್ಜಿ ಇವತ್ತು ತುಂಬಾ ನೆನಪಾಗಿ ಬಿಟ್ಟರು.   ಮಾವು ಅಂದರೆ ಹಾಗೆ  ಅದು ಬರಿ ಹಣ್ಣಲ್ಲ ನೆನಪುಗಳ ಗುಚ್ಛ..  ಮಾರ್ಚ್ ಪರೀಕ್ಷೆ ಮುಗಿಯುವುದರೊಳಗೆ ಮಿಡಿಗಳೆಲ್ಲಾ ದೋರೆಯಾಗುತ್ತಿದ್ದಂತೆ ಚೀಲಕ್ಕೆ ಹಾಕಿಕೊಂಡು ಕುಂದಾಪುರಕ್ಕೆ ಹೊರಟು ಬರುತ್ತಿದ್ದ ಅಜ್ಜ ಬದುಕಿರುವ ತನಕವೂ ಯಾವತ್ತೂ ನಮ್ಮನ್ನು ಮಾವಿಗಾಗಿ ಕಾಯಲು ಬಿಟ್ಟಿಲ್ಲ.  ಹಣ್ಣಿನ ಮರಗಳ ಮೇಲೆ ಅಜ್ಜನಿಗಿದ್ದ ಸೆಳೆತವೇ ಅಂತದ್ದು.  ಗಿಡ ನೆಡಲೆಂದೇ ಬಾರ್ಕೂರಿನಿಂದ  ನೆಕ್ಕರೆ,  ಕುಂಜಾಲಿನಿಂದ ಮಲಗೋವಾ ತಳಿಗಳ ಹಣ್ಣು ತರುತ್ತಿದ್ದರು. ಹೋರಿಗಳಿಗೆ ಅಕ್ಕಚ್ಚು ಕೊಟ್ಟು ಬಂದು  ರೇಡಿಯೋ ಚಾಲು ಮಾಡಿ ಪತ್ತಾಸಿನ ಮೇಲೆ ಕಚ್ಚೆ ಹಾಕಿ ಕೂತು ಕತ್ತಿಯಿಂದ ಹಣ್ಣನ್ನೆಲ್ಲ ಕಟ್ ಮಾಡಿ ಇಡುತ್ತಿದ್ದರೆ ನಮಗೆಲ್ಲ ಗೊರಟಿನ ಭಾಗ ಯಾರಿಗೆ ಕೊಡ್ತಾರೆ ಅನ್ನೋದೇ ಕುತೂಹಲ..  ಅಜ್ಜನಿಗೂ ಗೊತ್ತಿರುತ್ತಿತ್ತು ನಾವು ಗೊರಟಿಗೆ ಕಾಯ್ತೆವೇ ಅಂತ.  ಎಲ್ಲರಿಗಿಂತ ಮೊದಲು ನನ್ನ ಕರೆದು ಗೊರಟಿನ ಭಾಗ ಕೊಡ್ತಿದ್ದರು.  ಅಲ್ಲಿಂದಾಚೆಗೆ ಕನಿಷ್ಠ 2 ಗಂಟೆಯ ತನಕವಾದರೂ ಅದನ್ನ ನೆಕ್ಕಿ ನೆಕ್ಕಿ ಎರಡು ಸಲ ಪೂರ್ತಿ ಗೊರಟನ್ನ ಬಾಯಿಯೊಳಗೆ ತುಂಬಿಸಿ ಕೊಂಡು ಮತ್ತೆ ಹೊರಗೆ ತೆಗೆದು ಇನ್ನೇನು ಅದರಲ್ಲಿ ರಸ ಉಳಿದಿಲ್ಲ ಅಂತ ಖಾತ್ರಿಯಾದ ಮೇಲೆ ಚಿಕ್ಕಿಗೆ ಕೊಡುತ್ತಿದ್ದೆ.  ಚಿಕ್ಕಿಯೋ ನನ್ನನ್ನು  ಬೆನ್ನ ಮೇಲೆ ಹೊತ್ತುಕೊಂಡು ಉಪ್ಪು ಮೂಟೆ ಮಾಡುತ್ತಾ ಗೆದ್ದೆಗೆ ಕರೆದುಕೊಂಡು ಹೋಗಿ ಅಲ್ಲಿ ಎಷ್ಟು ದೂರ ಸಾಧ್ಯವೋ ಅಷ್ಟು ದೂರ ಎಸೆದು 'ಕೂ' ಹೊಡೆದು ಬರುತ್ತಿದ್ದೆವು.  ಆಮೇಲೆ ನಾವು ಗೊರಟು ಎಸೆದಲ್ಲಿ ಗಿಡ ಬೆಳೆದಿದೆಯಾ ಅಂತ ನಿತ್ಯವೂ ನೋಡುವ ಕಾಯಕ ನಮಗೆ.
ಮನೆಯ ಹಿಂದಿನ ಕಾಟು ಮರದ ಹಣ್ಣನ್ನೆಲ್ಲಾ ಹೆಕ್ಕಿ ತಂದು ಕುಕ್ಕೆಯಲ್ಲಿ ಹಾಕಿಡುತ್ತಿದ್ದ ಅಜ್ಜಿ,  ವರ್ಷವೂ ಮೊದಲ ಹಣ್ಣನ್ನು ದೋರೆ ಇರುವಾಗಲೇ ಅಕ್ಕಿ ಡಬ್ಬಿಯೊಳಗೆ ಹುಗಿದಿಟ್ಟು ಹಣ್ಣಾದ ಕೂಡಲೇ ನಮಗೆ ತಂದು ಕೊಡುತ್ತಿದ್ದ ಅಜ್ಜ ಇವತ್ತು ತುಂಬಾ ನೆನಪಾಗಿ ಬಿಟ್ಟರು.  ಇವತ್ತು ಅಮ್ಮ ಚೀಲದಲ್ಲಿ ಹಣ್ಣು ತಂದಾಗ ಚಂಗನೆ ಹಾರಿ ಹೋಗಿ ಹಣ್ಣನ್ನೆಲ್ಲಾ  ತೆಗೆದಿಟ್ಟೆ.  ತಕ್ಷಣವೇ ಯಾವತ್ತೂ ಮಾವು,  ಹಲಸು ಕಡಿಮೆಯಾಗದಂತೆ ನೋಡಿಕೊಂಡಿದ್ದ ಅಜ್ಜ ಅಜ್ಜಿಯ ನೆನಪು ಕಣ್ಣು ತುಂಬಿ ಬರುವಂತೆ ಮಾಡಿದವು.  ಮಾವು,  ಹಲಸು ಅಂದರೆ ಕರಾವಳಿ,  ಮಲೆನಾಡಿನವರಿಗೆ ಕೇವಲ ಹಣ್ಣುಗಳಲ್ಲ, ಭಾವನೆಗಳ ಹೂರಣ..  ಹೇಳಿಕೊಳ್ಳಲಾಗದ ಆತ್ಮೀಯತೆಯ ಸೆಳೆತ.  ಇದೆಲ್ಲಾ ಮಾರ್ಕೆಟ್ ನಲ್ಲಿ ಕೆ.ಜಿ ಲೆಕ್ಕದಲ್ಲಿ ದುಡ್ಡು ಕೊಟ್ಟು ತಿನ್ನುವ ಇವತ್ತಿನವರಿಗೆ ಅರ್ಥವಾಗಲಿಕ್ಕಿಲ್ಲ.
✍️ಕಾಳಿಕಾ ಛಾಯೆ

No comments:

Post a Comment