ಕನ್ನಡಕ್ಕೊಬ್ಬರು ಕುಲಪುರೋಹಿತರಿದ್ದರು. ಕರ್ನಾಟಕದ ಏಕೀಕರಣಕ್ಕಾಗಿ ಅವರು ರಕ್ತ ಬಸಿದಿದ್ದರು. ಅವರನ್ನು ಇಂದಿನ ಎಷ್ಟು ಕನ್ನಡ ಹೋರಾಟಗಾರರು ನೆನಪಿಟ್ಟುಕೊಂಡಿದ್ದಾರೆ.
"ಕನ್ನಡ ತಾಯಿಗೆ ಈಗ ಬಂದೊದಗಿದ ವಿಷಮ ಸ್ಥಿತಿಯನ್ನು ಕಂಡು ಯಾವಾತನ ಹೃದಯದ ತಲ್ಲಣಿಸುವುದಿಲ್ಲವೋ ಅದು ಹೃದಯವಲ್ಲ ಕಲ್ಲಿನ ಬಂಡೆ ; ದೇಹವಲ್ಲ, ಮೋಟು ಮರ " ಎಂಬ ಅವರ ಮಾತುಗಳು ಮತ್ತೆ ಕಟ್ಟಬೇಕಿದ್ದ ಕನ್ನಡದ ಸಮಗ್ರ ಚಿಂತನೆಗೆ ಒಂದು ಅಡಿಗಲ್ಲಿನಂತಿತ್ತು. ಆಲೂರು ವೆಂಕಟರಾಯರು ಹುಟ್ಟಿದ ದಿನವಿಂದು. ಅವರ ಜನ್ಮದಿನ ಕನ್ನಡಿಗರಿಗೆ ಪ್ರೇರಣೆ ನೀಡುವ ಸಂಭ್ರಮದ ದಿನವಾಗಬೇಕಿತ್ತು. ಕನ್ನಡ ಹೋರಾಟಗಾರರಿಗೆ ಆರಾಧ್ಯ ದೈವವಾಗಬೇಕಿದ್ದ ಆಲೂರರ ಬಗ್ಗೆ ತಿಳಿದುಕೊಳ್ಳಲು ರಾಜಕೀಯ ಪ್ರೇರಿತ ಕನ್ನಡಪರ ಸಂಘಟನೆಗಳಿಗೆ ಅದೇನೋ ವೈರಾಗ್ಯ. ಆಲೂರರು ಕೇವಲ ಕನ್ನಡ ಹೋರಾಟಗಾರರಾಗಿರಲಿಲ್ಲ ಅವರೊಬ್ಬ ಪತ್ರಕರ್ತರಾಗಿದ್ದರು, ಸ್ವತಃ ಸಾಹಿತಿಯಾಗಿದ್ದರು, ಉದ್ಯಮಿಯಾಗಿದ್ದರು, ಅಧ್ಯಾತ್ಮ ಜೀವಿಯಾಗಿದ್ದರು, ರಾಷ್ಟೀಯವಾದಿಯಾಗಿದ್ದರು. ಆಲೂರರು
1903ರಲ್ಲಿ ಬಿ.ಎ ಪದವಿ ಪಡೆದು 1905ರಲ್ಲಿ ಮುಂಬೈ ನಲ್ಲಿ ಎಲ್ ಎಲ್ ಬಿ ಪದವಿ ಪಡೆದು ಧಾರವಾಡಕ್ಕೆ ವಾಪಸ್ಸಾಗುವಾಗ ಸೇನಾಪತಿ ಬಾಪಟ್ ಹಾಗೂ ವೀರ ಸಾವರ್ಕರ್ ಅವರ ಒಡನಾಟದಿಂದ ಬಹಳಷ್ಟು ಪ್ರಭಾವಿತರಾಗಿದ್ದರು. ಹೌದು ಯಾವ ಆಲೂರು ವೆಂಕಟರಾಯರು ಕರ್ನಾಟಕದ ಏಕೀಕರಣಕ್ಕಾಗಿ ಹಗಲಿರುಳು ದುಡಿದರೋ, ಯಾವ ಆಲೂರರು ಕರ್ನಾಟಕ ಇತಿಹಾಸ ಮಂಡಲದ ಸ್ಥಾಪನೆ ಮಾಡಿದರೋ, ಯಾವ ಆಲೂರರು ಕರ್ನಾಟಕ ಸಾಹಿತ್ಯ ಪರಿಷತ್ತನ್ನು ಸ್ಥಾಪಿಸಿದರೋ, ಕರ್ನಾಟಕ ವಿಶ್ವ ವಿದ್ಯಾಲಯದ ಕಲ್ಪನೆಯನ್ನು ಹುಟ್ಟುಹಾಕಿದರೋ, ಯಾವ ಆಲೂರರು ವಿಜಯ ನಗರ ಮಹೋತ್ಸವ, ನಾಡಹಬ್ಬದ ಯೋಜನೆಗಳಿಗೆ ಅಡಿಗಲ್ಲು ಹಾಕಿದರೋ, ಕರ್ನಾಟಕ ವಿದ್ಯಾವರ್ಧಕ ಸಂಘದ ರೂವಾರಿಗಳಾಗಿದ್ದರೋ ಅದೇ ಕನ್ನಡದ ಕುಲಪುರೋಹಿತ ಅಪ್ರತಿಮ ದೇಶಪ್ರೇಮಿ ವಿನಾಯಕ ದಾಮೋದರ ಸಾವರ್ಕರ್ ಅಂದ್ರೆ ವೀರ ಸಾವರ್ಕರ್ ಅವರ ಒಡನಾಡಿಯಾಗಿದ್ದು ಅವರಿಂದ ಪ್ರೇರಣೆ ಪಡೆದಿದ್ದರು ಎನ್ನುವುದು ಇಂದಿನ ಕನ್ನಡ ಹೋರಾಟಗಾರರು ಅಂತ ಕರೆಸಿಕೊಳ್ಳುವವರಿಗೆ ತಿಳಿದಿದೆಯಾ? ತಿಳಿದಿದ್ದರೆ ಖಂಡಿತ ಒಂದು ಮೇಲ್ಸೇತುವೆಗೆ ಸಾವರ್ಕರ್ ಹೆಸರಿಡುವುದಕ್ಕೆ ವಿರೋಧಿಸುತ್ತಿರಲಿಲ್ಲ.
ಮರಾಠಿಯದ್ದೇ ಪ್ರಾಬಲ್ಯ ಹೊಂದಿದ್ದ ಮುಂಬೈ ಪ್ರಾಂತ್ಯದಲ್ಲಿ ವಾಗ್ಭುಷಣ ಎನ್ನುವ ಪತ್ರಿಕೆ ಪ್ರಾರಂಭಿಸಿ ನೂರಾರು ಬರಹಗಾರರಿಗೆ ವೇದಿಕೆ ಕಲ್ಪಿಸುತ್ತಾರೆ.
ಬಾಲಗಂಗಾಧರ ತಿಲಕರ ಅತ್ಯಂತ ಆಪ್ತರಾಗಿದ್ದ ಆಲೂರರು ಕನ್ನಡಕ್ಕಾಗಿ ಎಷ್ಟು ದುಡಿದರೋ ಅಷ್ಟೇ ಶ್ರಮವಹಿಸಿ ರಾಷ್ಟೀಯ ಚಿಂತನೆಗಾಗಿ ಹೋರಾಡಿದರು. ತಿಲಕರ ಗೀತಾ ರಹಸ್ಯವನ್ನು ಅವರ ಒತ್ತಾಯದ ಮೇರೆಗೆ ಕನ್ನಡಕ್ಕೆ ಅನುವಾದಿಸುತ್ತಾರೆ. ಇದು ಆಲೂರರ ಧಾರ್ಮಿಕ ಹಾಗೂ ರಾಜಕೀಯ ದೃಷ್ಟಿ ಕೋನಕ್ಕೆ ಕನ್ನಡಿ ಹಿಡಿದಂತಿದೆ. ಅವರೊಬ್ಬ ಅದ್ಭುತ ಧಾರ್ಮಿಕ ಚಿಂತಕರಾಗಿದ್ದರು. ಸದಾ ಧಾರ್ಮಿಕ ಚಿಂತನೆಯಲ್ಲಿ ತೊಡಗಿದ್ದರೂ ಕೂಡ ರಾಷ್ಟ್ರ ಚಿಂತನೆಯ ಸಂದರ್ಭ ಬಂದಾಗ ಅಪ್ಪಟ ರಾಷ್ಟೀಯವಾದಿಯಾಗಿ ಹೋರಾಟಕ್ಕಿಳಿಯುತ್ತಿದ್ದರು. ಸ್ವತಃ ಒಬ್ಬ ವಕೀಲರಾಗಿದ್ದರೂ ಕೂಡ ಸ್ವದೇಶಿ ಚಳುವಳಿ ಬಂದಾಗ ತಮ್ಮ ವೃತ್ತಿ ತ್ಯಜಿಸಿ ಹೋರಾಟಕ್ಕೆ ಧುಮುಕಿದ ಅವರ ಬದ್ಧತೆಯೇ ಅದಕ್ಕೆ ಸಾಕ್ಷಿ.
ಕರ್ನಾಟಕದ ಮೂಲೆ ಮೂಲೆಗಳಲ್ಲೂ ಕನ್ನಡ ಸಾಹಿತಿಗಳನ್ನು ಬೆಳೆಸಬೇಕೆಂಬ ಹಂಬಲ ಹೊಂದಿದ್ದ ಆಲೂರರು ಅವರಿಗೆಲ್ಲ ವೇದಿಕೆ ಕಲ್ಪಿಸುವ ಉದ್ದೇಶದಿಂದಲೇ 'ಜಯಕರ್ನಾಟಕ ' ಎಂಬ ಪತ್ರಿಕೆ ಪ್ರಾರಂಭಿಸುತ್ತಾರೆ. ದ.ರಾ. ಬೇಂದ್ರೆ, ಬೆಟಗೇರಿ ಕೃಷ್ಣ ಶರ್ಮಾ, ಶ್ರೀ ರಂಗ, ಶಂ ಭಾ. ಜೋಶಿಯವರಂತಹ ಹಲವರು ಸಾಹಿತ್ಯ ರತ್ನಗಳು ಹುಟ್ಟಿ ಬಂದದ್ದು ಇಲ್ಲಿಂದಲೇ. ನೂರಾರು ಶ್ರೇಷ್ಠ ಸಾಹಿತಿಗಳನ್ನು ಸಲಹಿ ಪೋಷಿಸಿದ ಸ್ವತಃ 25ಕ್ಕೂ ಹೆಚ್ಚು ಕೃತಿಗಳನ್ನು ಬರೆದ್ದರೂ ಎಂದಿಗೂ ತಾನೊಬ್ಬ ಸಾಹಿತಿ ಎಂದು ಗುರುತಿಸಿಕೊಳ್ಳಲು ಬಯಸಿರಲಿಲ್ಲ.
ಆಲೂರರು ಅದೆಂತಹ ಅಧ್ಯಾತ್ಮ ಜೀವಿಯಾಗಿದ್ದರೆಂದರೆ 1931 ರಲ್ಲಿ ಬ್ರಿಟಿಷ್ ಸರ್ಕಾರ ಅವರನ್ನು ಬಂಧಿಸಲು ಸರ್ಚ್ ವಾರೆಂಟ್ ಜಾರಿಗೊಳಿಸುತ್ತದಂತೆ. ಆಮೇಲೆ ಅವರನ್ನು ಕಲಘಟಗಿ ಎನ್ನುವ ಪ್ರದೇಶದಲ್ಲಿ ಬಂಧಿಸಿಡಲಾಗುತ್ತದಂತೆ. ಒಬ್ಬ ಅಪ್ರತಿಮ ಹೋರಾಟಗಾರರಾಗಿದ್ದ ಆಲೂರರು"ಈ ಬಂಧನದಿಂದ ನನಗೇನೂ ನಷ್ಟವಿಲ್ಲ ಆಧ್ಯಾತ್ಮ ಚಿಂತನೆಗೆ, ಅಧ್ಯಯನಕ್ಕೆ ನನಗೊಂದಿಷ್ಟು ಬಿಡುವು ಸಿಕ್ಕಂತಾಗಿದೆ " ಎಂದಿದ್ದರಂತೆ. ಅದರಂತೆಯೇ ಬಿಡುಗಡೆಯ ಬಳಿಕ ಭಗವದ್ಗೀತೆಯ ಕುರಿತು ನಾಲ್ಕು ವಿದ್ವತ್ ಪೂರ್ಣ ಗ್ರಂಥಗಳನ್ನೂ ರಚಿಸಿದರು.
ಆಲೂರರು ಒಬ್ಬ ವಿಭಿನ್ನ ಚಿಂತನೆಯ ಉದ್ಯಮಿ ಕೂಡ ಆಗಿದ್ದರು. ಸ್ವದೇಶಿ ಚಳುವಳಿಯಿಂದ ಬಹಳಷ್ಟು ಪ್ರಭಾವಿತರಾಗಿದ್ದ ಆಲೂರರು ಈ ನೆಲದ ಮಕ್ಕಳ ಕೈಗೆ ದುಡಿಮೆ ನೀಡಬೇಕೆಂಬ ಕಾರಣಕ್ಕೆ ಹೆಂಚಿನ ಕಾರ್ಖಾನೆ, ಹತ್ತಿಯ ಮಿಲ್ಲು, ಸಕ್ಕರೆ ಕಾರ್ಖಾನೆ, ಬೆಂಕಿ ಪಟ್ಟಣದ ಕಾರ್ಖಾನೆ, ಪೆನ್ಸಿಲ್ ತಯಾರಿಸುವ ಕಾರ್ಖಾನೆ, ಬಟ್ಟೆಯ ಫ್ಯಾಕ್ಟರಿಗಳನ್ನು ಪ್ರಾರಂಭಿಸಿದ್ದರಂತೆ. ಬಹುತೇಕ ಕಾರ್ಖಾನೆಗಳು ಬ್ರಿಟಿಷರ ದಬ್ಬಾಳಿಕೆಯಿಂದ ಮುಚ್ಚಲ್ಪಟ್ಟಿತ್ತು. ಕೇವಲ ತಯಾರಿಕಾ ಕಾರ್ಖಾನೆಗಳಷ್ಟೇ ಅಲ್ಲದೆ ಸೇವಾ ವಲಯದ ಉದ್ಯಮಗಳಾದ ವೃತ್ತಿಪರ ತರಬೇತಿ, ಚಿತ್ರಕಲಾ ತರಬೇತಿ ಪೇಯಿಂಟಿಂಗ್ ತರಬೇತಿ ಹೀಗೆ ಹತ್ತು ಹಲವು ತರಬೇತಿ ಶಿಕ್ಷಣವನ್ನೂ ಕನ್ನಡಿಗರಿಗಾಗಿ ಪ್ರಾರಂಭಿಸಿದ್ದರು. ಇವೆಲ್ಲ ದುಡಿಯುವ ಕೈಗಳಿಗೆ ದುಡಿಮೆ ನೀಡುವ ಉದ್ದೇಶದಿಂದ ಪ್ರಾರಂಭಿಸಿದ ಉದ್ಯಮಗಳೇ ಹೊರತು ಲಾಭದಾಯಕ ದೃಷ್ಟಿಕೋನ ಹೊಂದಿರಲಿಲ್ಲ.
ಕನ್ನಡದ ಸಂಸ್ಕೃತಿ, ಶ್ರೀಮಂತ ಪರಂಪರೆ, ಸಾಹಿತ್ಯ ವೈಭವಗಳನ್ನು ಮತ್ತೆ ಕಟ್ಟುವುದಕ್ಕಾಗಿ ತಮ್ಮ ಇಡೀ ಜೀವನವನ್ನೇ ಸವೆಸಿದ ಶ್ರೇಷ್ಠ ವ್ಯಕ್ತಿತ್ವ ಆಲೂರು ವೆಂಟಕರಾಯರದ್ದು. ಅದಕ್ಕಾಗಿಯೇ ವರಕವಿ ದ. ರಾ. ಬೇಂದ್ರೆಯವರು ವೆಂಕಟರಾಯರನ್ನು "ಕರ್ನಾಟಕದ ಪ್ರಾಣೋಪಾಸಕರು " ಅಂತಲೇ ಕರೆದದ್ದು. ಕನ್ನಡಕ್ಕಾಗಿ ದುಡಿದವರಲ್ಲಿ ಆಲೂರು ವೆಂಕಟರಾಯರು ನಿತ್ಯ ಸ್ಮರಣೀಯರು. ಕನ್ನಡಕ್ಕಾಗಿ ಹೋರಾಡುವುದೆಂದರೆ ತಮ್ಮ ಮಕ್ಕಳನ್ನು ಇಂಗ್ಲೀಷ್ ಮೀಡಿಯಂ ಶಾಲೆಗೆ ಹಾಕಿ ಕನ್ನಡ ಮಾಧ್ಯಮ ಶಾಲೆ ಉಳಿಸುವ ಹೋರಾಟ ಮಾಡುವುದಲ್ಲ, ಬದಲಿಗೆ ಆಲೂರು ವೆಂಕಟರಾಯರು ಹಾಕಿ ಕೊಟ್ಟ ಹಾದಿಯಲ್ಲಿ ನಡೆಯುವ ಪ್ರಯತ್ನ ಮಾಡುವುದು. ಅದು ರಾಷ್ಟೀಯತೆಯ ಹಾದಿಯಾಗಿರುವ ಕಾರಣಕ್ಕೆ ಬಹಳ ಮಂದಿಗೆ ಅಪಥ್ಯವಾಗಿದೆ ಅಷ್ಟೇ.
✍️ಚೈತ್ರಾ ಕುಂದಾಪುರ

ನಿಮ್ಮ ಈ ಬರಹದಿಂದ ತುಂಬಾ ಮಾಹಿತಿಗಳು ತಿಳಿದುಕೊಳ್ಲಲಾಹಿತು, ಮುಂದಿನ ದಿನಗಳಲ್ಲಿ ಇನ್ನು ಒಳ್ಳೆ ಒಳ್ಳೆ ಮಾಹಿತಿಗಳು ಸಿಗುತ್ತವೆ,ಎಂಬ ಆಸೆ ದುಪಟ್ಟಾಗಿದೆ
ReplyDeleteತಾಯಿ ಭಾರತಾಂಬೆಯ ಆಶೀರ್ವಾದ ಸದಾ ನಿಮ್ಮ ಮೇಲಿರಲ್ಲಿ
ಶುಭವಾಗಲಿ������